Advertisement

ಮೆಟ್ರೋ ನಿಲ್ದಾಣದಲ್ಲಿ ಎಎಫ್ಸಿ ಸಮಸ್ಯೆ

07:50 AM Jul 05, 2019 | Suhan S |

ಬೆಂಗಳೂರು: ಮೆಟ್ರೊ ರೈಲಿನಲ್ಲಿ ಪ್ರಯಾಣಿಕರು ನಗರದ ಒಂದು ದಿಕ್ಕಿನಿಂದ ಮತ್ತೂಂದು ದಿಕ್ಕಿಗೆ ಕೆಲವೇ ನಿಮಿಷಗಳಲ್ಲಿ ಬಂದು ಬಿಡುತ್ತಾರೆ. ಆದರೆ, ಆ ಮೆಟ್ರೊ ನಿಲ್ದಾಣದಿಂದ ಹೊರಬರಲು ಪ್ರಯಾಣಿಸುವುದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ.

Advertisement

ನಿತ್ಯ ಜನದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ನಗರದ ಪ್ರಮುಖ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಇಳಿಯುವ ಪ್ರಯಾಣಿಕರು ಪ್ಲಾಟ್ಪಾರ್ಮ್ನಿಂದ ಹೊರಬರುವಾಗ ಟೋಕನ್‌ ಸಂಗ್ರಹಿಸುವ ಎಎಫ್ಸಿ (ಆಟೋಮೇಟೆಡ್‌ ಫೇರ್‌ ಕಲೆಕ್ಷನ್‌ ಗೇಟ್) ಮುಂಭಾಗದಲ್ಲಿಯೇ ಹೆಚ್ಚು ಸಮಯವನ್ನು ಕಳೆಯಬೇಕಿದೆ. ಪ್ರತಿ ಮೆಟ್ರೊ ನಿಲ್ದಾಣದಲ್ಲಿ ಹೊರಗಡೆ ತೆರಳುವ ಒಂದು ದ್ವಾರದಲ್ಲಿ ಕನಿಷ್ಠ ಎರಡು, ಗರಿಷ್ಠ ಮೂರು ಟೋಕನ್‌ ಸಂಗ್ರಹಿಸುವ ಸ್ವಯಂ ಚಾಲಿತ ಗೇಟ್ (ಎಎಫ್ಸಿ )ಗಳಿದ್ದು, ಜನದಟ್ಟಣೆ ಅವಧಿಯಲ್ಲಿ ಪ್ರತಿ ಗೇಟ್ ಮುಂಭಾಗ ನೂರಕ್ಕು ಹೆಚ್ಚುಮಂದಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರಿಂದಾಗಿ ಶೀಘ್ರ ತಲುಪಬೇಕು ಎಂದು ಮೆಟ್ರೊ ರೈಲು ಹತ್ತಿದವರು ನಿಗದಿತ ಸ್ಥಳ ತಲುಪವುದಕ್ಕೆ ತಡವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.

ಬೆಳಗ್ಗೆ 8ರಿಂದ 11 ಗಂಟೆ ಹಾಗೂ ಸಂಜೆ 5ರಿಂದ 8 ಗಂಟೆವರೆಗೂ ಜನದಟ್ಟಣೆ ಹೆಚ್ಚಿರುವ ಅವಧಿ. ಈ ಅವಧಿಯಲ್ಲಿ ಬಿಎಂಆರ್‌ಸಿಎಲ್, ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ರೈಲುಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಒಂದು ಮಾರ್ಗದ ನಿಗದಿತ ನಿಲ್ದಾಣದಲ್ಲಿ ಎಂಟು ನಿಮಿಷಕ್ಕೆ ಒಂದು ರೈಲು ಸಂಚರಿಸಿದರೆ, ಈ ವೇಳೆಯಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತದೆ. ಒಂದು ರೈಲಿನಿಂದ ಪ್ರಯಾಣಿಕರು ಇಳಿದು ಸ್ವಯಂ ಚಾಲಿತ ಗೇಟ್ಬಳಿ ಬಂದು ಟೋಕನ್‌ ಹಾಕಿ ಹೊರ ಹೋಗುವುದಕ್ಕು ಮೊದಲೇ ಮತ್ತೂಂದು ರೈಲು ಬರುತ್ತದೆ. ಇದರಿಂದ ನಿಲ್ದಾಣದಿಂದ ಹೊರಬರುವ ಪ್ರಯಾಣಿಕರ ದೊಡ್ಡ ಸಾಲು ಕಂಡುಬರುತ್ತಿದೆ.

ಈ ವೇಳೆ ಮಾಹಿತಿ ಇಲ್ಲದ ಕೆಲ ಪ್ರಯಾಣಿಕರು ಟೋಕನ್‌ ಹಾಕದೆ ತಪ್ಪಾಗಿ ಗೇಟ್ ದಾಟಲು ಮುಂದಾದರೆ ಕೆಂಪು ಬಣ್ಣ ತೋರಿ, ಬೀಪ್‌ ಸದ್ದು ಮಾಡುತ್ತಾ ಕನಿಷ್ಠ 10 ಸೆಕೆಂಡ್‌ ಗೇಟ್ ಬಂದ್‌ ಆಗಿ ನಿಲ್ದಾಣದಿಂದ ಹೊರಬರುವುದು ಮತ್ತಷ್ಟು ತಡವಾಗುತ್ತಿದೆ. ಆಗಾಗ ತಾಂತ್ರಿಕ ದೋಷದಿಂದ ಕೆಲವು ನಿಲ್ದಾಣಗಳಲ್ಲಿ ಒಂದು ಅಥವಾ ಎರಡು ಸ್ವಯಂ ಚಾಲಿತ ಗೇಟ್‌ಗಳನ್ನು ಮುಚ್ಚಿರುತ್ತಾರೆ. ಈ ವೇಳೆ ಪ್ರಯಾಣಿಕರು ಹೊರಬರಲು ಪರದಾಡುತ್ತಾರೆ.

ಮುಖ್ಯವಾಗಿ ಬೆಳಗ್ಗೆ 8ರಿಂದ 11 ಗಂಟೆವರೆಗೂ ಮೆಜೆಸ್ಟಿಕ್‌, ಮಂತ್ರಿ ಮಾಲ್, ಸೆಂಟ್ರಲ್ ಕಾಲೇಜು, ವಿಧಾನಸೌಧ, ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ನಿಲ್ದಾಣಗಳಲ್ಲಿ ಸಂಜೆ 5ರಿಂದ 7 ಗಂಟೆವರೆಗೂ ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಇಂದಿರಾನಗರ, ಯಶವಂತಪುರ, ಜಯನಗರದಂತಹ ವಸತಿ ಪ್ರದೇಶಗಳ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತಿದೆ.

Advertisement

ಪ್ರಯಾಣಿಕರು ಎದುರಿಸುತ್ತಿರುವ ಇತರೆ ಸಮಸ್ಯೆಗಳು:

  • ಗರ್ಭಿಣಿಯರು ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್ ಫಾರ್ಮ್ ಪ್ರವೇಶಿಸಲು ಹಾಗೂ ನಿರ್ಗಮಿಸುವಾಗ ಸ್ವಯಂ ಚಾಲಿತ ಗೇಟ್ ಬದಲು ಸಿಬ್ಬಂದಿಯ ಗೇಟ್ ಬಳಸಲು ಬೆಂಗಳೂರು ಮೆಟ್ರೊ ರೈಲು ಸಂಚಾರ ನಿಗಮ ಅವಕಾಶ ಕಲ್ಪಿಸಲಿದೆ. ಆದರೆ, ಇದು ನಿಲ್ದಾಣಗಳಲ್ಲಿ ಪಾಲನೆಯಾಗುತ್ತಿಲ್ಲ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
  • 6 ಬೋಗಿಯ ಮೆಟ್ರೋ ರೈಲಿನಲ್ಲಿ ಒಂದು ಬೋಗಿ ಮಾತ್ರ ಪ್ರತೇಕವಾಗಿ ಮಹಿಳೆಯರಿಗಿದ್ದು, ಜನದಟ್ಟಣೆ ಅವಧಿಯಲ್ಲಿ ಪ್ರತ್ಯೇಕ ಬೋಗಿ ತುಂಬಿ ಇತರೆ ಬೋಗಿಯಲ್ಲಿ ಹತ್ತುವ ಮಹಿಳಾ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಮಹಿಳಾ ಪ್ರಯಾಣಿಕರ ಬೋಗಿ ಸಂಖ್ಯೆ ಹೆಚ್ಚಿಸಬೇಕು.
  • ನಿಲ್ದಾಣಗಳಲ್ಲಿ ಎರಡು ಮೂರು ಟಿಕೆಟ್ ಕೌಂಟರ್‌ಗಳು ಇದ್ದರೂ ದಿನದ ಬಹುತೇಕ ಸಮಯದಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತದೆ.
  • ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಹೆಚ್ಚು ಮೊಬೈಲ್ ಬಳಸುತ್ತಾ ಪ್ರಯಾಣಿಕರ ತಪಾಸಣೆಯಲ್ಲಿ ನಿಲ್ಯಕ್ಷ್ಯವಹಿಸಿ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
  • ಇಂದಿಗೂ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಂದಿಳಿಯುವವರು ಈಗಲೂ ನಿರ್ಗಮನ ದ್ವಾರ, ಮಾರ್ಗ ಬದಲಾವಣೆಗೆ ತಡಕಾಡುತ್ತಿದ್ದಾರೆ.

 

  .ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next