Advertisement

ಆತಿಥೇಯ ಯುಎಇ-ಕತಾರ್‌ ಪಂದ್ಯದ ವೇಳೆ ಶೂ ಎಸೆತ

12:55 AM Feb 01, 2019 | Team Udayavani |

ಅಬುಧಾಬಿ: ಆತಿಥೇಯ ಯುಎಇ ಹಾಗೂ ಕತಾರ್‌ ನಡುವೆ ಬುಧವಾರ ನಡೆದ ಎಎಫ್ಸಿ ಏಷ್ಯಾಕಪ್‌ ಸೆಮಿಫೈನಲ್‌ ಪಂದ್ಯ ವಿವಾದಕ್ಕೆ ತುತ್ತಾಗಿದೆ. ಆತಿಥೇಯ ತಂಡವನ್ನು ಎದುರಾಳಿ ಕತಾರ್‌ 4-0ಯಿಂದ ಸೋಲಿಸಿದ ಬಳಿಕ ರೊಚ್ಚಿಗೆದ್ದ ಆತಿಥೇಯ ಅಭಿಮಾನಿಗಳು ಮೈದಾನದತ್ತ ಶೂ, ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಇದಕ್ಕೆ ಕಾರಣವಾದ ವ್ಯಕ್ತಿಗಳು ಯಾರು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಏಷ್ಯಾ ಫ‌ುಟ್‌ಬಾಲ್‌ ಸಂಸ್ಥೆ ಹೇಳಿದೆ.

Advertisement

2022ರ ವಿಶ್ವಕಪ್‌ ಫ‌ುಟ್‌ಬಾಲ್‌ ಆಯೋಜನೆ ಮಾಡುತ್ತಿರುವ ಕತಾರ್‌, ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸುವ ಉಮೇದಿನಲ್ಲಿದೆ. ಆದ್ದರಿಂದ ಆ ತಂಡದಲ್ಲಿ ಹಲವು ವಿದೇಶಿ ಆಟಗಾರರು ಆಡುತ್ತಿದ್ದಾರೆ! ಇದೇ ವೇಳೆ ಕತಾರ್‌ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ, ಅದರ ಜೊತೆಗೆ ಹಲವು ಅರಬ್‌ ರಾಷ್ಟ್ರಗಳು ರಾಜತಾಂತ್ರಿಕ ಹಾಗೂ ಸಾರಿಗೆ ಸಂಬಂಧಗಳನ್ನು ಕಡಿದುಕೊಂಡಿವೆ. ಇತರೆ ಅರಬ್‌ ರಾಷ್ಟ್ರಗಳು ಬಿಗಿಯಾದ ನಿಲುವು ಹೊಂದಿದ್ದರೂ, ಕತಾರ್‌ ಬಗ್ಗೆ ಯುಎಇ ಸ್ವಲ್ಪ ಮೃದುಧೋರಣೆ ಹೊಂದಿದೆ. ಆದರೂ ಎರಡೂ ರಾಷ್ಟ್ರಗಳ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಈ ಎಲ್ಲವೂ ಅಭಿಮಾನಿಗಳ ವರ್ತನೆಗೆ ಹಿನ್ನೆಲೆಯಾಗಿದೆ.

ಆತಿಥೇಯ ಯುಎಇ ತನ್ನ ತಂಡಕ್ಕೆ ಅಭಿಮಾನಿಗಳ ಪೂರ್ಣ ಬೆಂಬಲವಿರಬೇಕು ಎಂಬ ಕಾರಣದಿಂದ ಸಾವಿರಾರು ಟಿಕೆಟ್‌ಗಳನ್ನು ತಾನೇ ಖರೀದಿಸಿತ್ತು. ಇದರರ್ಥ, ಮೊಹಮ್ಮದ್‌ ಬಿನ್‌ ಜಾಯೆದ್‌ ಮೈದಾನದಲ್ಲಿ ಹಾಜರಿದ್ದ 42,000 ಅಭಿಮಾನಿಗಳ ಪೈಕಿ ಶೇ.90ರಷ್ಟು ಮಂದಿ ಯುಎಇ ಬೆಂಬಲಕ್ಕಿದ್ದರು. ಆ ಪ್ರಮಾಣದ ಬೆಂಬಲದ ನಡುವೆಯೂ ತಮ್ಮ ತಂಡ ಹೀನಾಯವಾಗಿ ಸೋತಿದ್ದನ್ನು ಅಭಿಮಾನಿಗಳು ಅರಗಿಸಿಕೊಂಡಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next