ಅಫಜಲಪುರ: ಅನೇಕರಲ್ಲಿ ಆಯುಷ್ ಇಲಾಖೆ ಬಗ್ಗೆ ತಪ್ಪು ತಿಳಿವಳಿಕೆಯಿದೆ. ಆದರೆ ಆಯುಷ್ ವೈದ್ಯ ಪದ್ಧತಿ ಸಾವಿರಾರು ವರ್ಷಗಳಷ್ಟು ಹಳೆಯದು. ಅಡ್ಡಪರಿಣಾಮವಿಲ್ಲದ ಪದ್ಧತಿಯಾಗಿದೆ. ಹೀಗಾಗಿ ಆಯುಷ್ ಇಲಾಖೆ ಮಹತ್ವ ಎಲ್ಲರಿಗೂ ತಿಳಿಸಬೇಕು ಎಂದು ವೈದ್ಯೆ ಡಾ| ಸುಜಾತಾ ಪಾಟೀಲ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಜಿಲ್ಲಾ ಆಯುಷ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಯುಷ್ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಜನರಲ್ಲಿನ ತಪ್ಪು ಭಾವನೆಗಳನ್ನು ಹೋಗಲಾಡಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರನ್ನು ಕಾರ್ಯಾಗಾರಕ್ಕೆ ಕರೆದು ಆಯುಷ್ ಇಲಾಖೆಯ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಂಗನವಾಡಿಗೆ ಬರುವ ಮಕ್ಕಳು ಹಾಗೂ ಮಕ್ಕಳ ಪಾಲಕರಿಗೆ ಆಯುಷ್ ಇಲಾಖೆಯ ಕುರಿತು, ಯೋಜನೆಗಳ ಕುರಿತು ಮಾಹಿತಿ ನೀಡುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಆಯುಷ್ ಇಲಾಖೆ ಜಿಲ್ಲಾ ವೈದ್ಯಾಧಿ ಕಾರಿ ಡಾ| ರವೀಂದ್ರ ಗಿರಿ ಮಾತನಾಡಿ, ಆಯುರ್ವೇದ, ಯೋಗ, ಯುನಾನಿ, ಸಿದ್ಧಿ, ಹೋಮಿಯೋಪತಿ ಎಲ್ಲವೂ ಸೇರಿ ಆಯುಷ್ ಇಲಾಖೆಯಾಗಿದೆ. ಆಯುಷ್ ಚಿಕಿತ್ಸಾ ಪದ್ಧತಿಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೆ ಕಡಿಮೆ ಚಿಕಿತ್ಸಾ ವೆಚ್ಚದಲ್ಲಿ ರೋಗಗಳನ್ನು ಗುಣಪಡಿಸುವ ಕೆಲಸ ಆಯುಷ್ ಇಲಾಖೆ ಮಾಡುತ್ತಿದೆ ಎಂದರು.
ತಾಲೂಕು ವೈದ್ಯಾಧಿ ಕಾರಿ ಡಾ| ವಿ.ಎಸ್ ಸಾಲಿಮಠ, ಡಾ| ಎಂ.ಬಿ. ಪಾಟೀಲ ಮಾತನಾಡಿ, ಜನರಲ್ಲಿ ಆಯುಷ್ ಇಲಾಖೆ ಬಗ್ಗೆ ಇರುವ ತಪ್ಪು ತಿಳಿವಳಿಕೆ ದೂರವಾಗಿಸುವ ಸಲುವಾಗಿ ಇಂತಹ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಈ ಕಾರ್ಯಾಗಾರ ಇಲ್ಲಿಗೆ ನಿಲ್ಲುವುದಿಲ್ಲ. ಇಂತಹ ಅನೇಕ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಡಾ| ಮಲ್ಲೇರಾವ್ ಮಲ್ಲೆ ಮಾಹಿತಿ ನೀಡಿದರು. ಮುಖಂಡ ಸದ್ದಾಂಹುಸೇನ್ ನಾಕೇದಾರ, ಸಿಡಿಪಿಒ ಇಲಾಖೆಯ ಸರಳಾ ದೊಡ್ಮನಿ, ಡಾ| ಮನೋರಮಾ ಕಕ್ಕಳಮೇಲಿ, ಡಾ| ಮಲ್ಲಣ್ಣ, ಡಾ| ಶ್ರೀಶೈಲ ಪಾಟೀಲ, ಡಾ| ನಾಜಿಯಾ, ಡಾ| ಸುಧಿಧೀರ, ಡಾ| ಉಮಾಶಂಕರ, ಡಾ| ಪ್ರದೀಪ ಪಾಟೀಲ, ಸಿಡಿಪಿಒ ಇಲಾಖೆ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆರು ಮತ್ತು ಆಯುಷ್ ಇಲಾಖೆ ಸಿಬ್ಬಂದಿ ಇದ್ದರು.