Advertisement

ಅಫಜಲಪುರ ಬಸ್‌ ನಿಲ್ದಾಣವೇ ಅದ್ವಾನ; ತಪ್ಪಿಲ್ಲ ಪರದಾಟ

10:56 AM Nov 28, 2019 | Naveen |

 

Advertisement

„ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ತಾಲೂಕು ಕೇಂದ್ರದ ಬಸ್‌ ನಿಲ್ದಾಣ ಎಂದರೆ ಅದೊಂದು ರೀತಿಯ ಎಲ್ಲ ಸೌಲಭ್ಯಗಳಿರುವ ಸಾರ್ವಜನಿಕ ತಾಣವಾಗಿರಬೇಕು. ಆದರೆ ಅಫಜಲಪುರ ಬಸ್‌ ನಿಲ್ದಾಣವೇ ಅದ್ವಾನವಾಗಿದೆ. ಇಲ್ಲಿ ಯಾವ ಕನಿಷ್ಠ ಸೌಲಭ್ಯಗಳು ಪ್ರಯಾಣಿಕರಿಗೆ ಸಿಗುವುದಿಲ್ಲ. ಸಿಸಿ ಕ್ಯಾಮೆರಾ ಕೆಟ್ಟು ವರ್ಷ ಗತಿಸಿದರೂ ದುರಸ್ತಿಯಿಲ್ಲ: ಬಸ್‌ ನಿಲ್ದಾಣದಲ್ಲಿ ಪ್ರತಿಯೊಂದು ಚಟುವಟಿಕೆ ಮೇಲೆ ನೀಗಾ ಇಡುವ ಸಲುವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಆದರೆ ಕ್ಯಾಮೆರಾಗಳು ಕೆಟ್ಟು ಸುಮಾರು ಒಂದು ವರ್ಷವೇ ಗತಿಸಿದೆ. ಕ್ಯಾಮೆರಾ ಕೆಟ್ಟಿರುವ ಕುರಿತು ಕೆಲವು ತಿಂಗಳ ಹಿಂದೆ ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯ ಬಳಿಕವು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಹೀಗಾಗಿ ವರ್ಷಗಳೇ ಗತಿಸಿದರೂ ಬಸ್‌ ನಿಲ್ದಾಣದ ಕ್ಯಾಮೆರಾಗಳಿಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಇದರಿಂದ ಬಸ್‌ ನಿಲ್ದಾಣದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿಲ್ಲ.

ಮಾರ್ಗಸೂಚಿ ಹೇಳುವುದಿಲ್ಲ: ಬಸ್‌ ನಿಲ್ದಾಣದಲ್ಲಿ ಕರ್ಕಶವಾದ ಸದ್ದಿನಲ್ಲಿ ನಿತ್ಯ ನೂರಾರು ಜಾಹೀರಾತುಗಳನ್ನು ಬಿತ್ತರಿಸಲಾಗುತ್ತಿದೆ. ಆದರೆ ಒಮ್ಮೆಯೂ ಯಾವ ಬಸ್ಸು ಎಲ್ಲಿಗೆ ಹೋಗುತ್ತದೆ, ಎಲ್ಲಿ ನಿಂತಿದೆ ಎಂದು ಹೇಳುವುದಿಲ್ಲ. ಮಾರ್ಗಸೂಚಿ ಹೇಳದೇ ಇರುವುದರಿಂದ ಹಳ್ಳಿಗಳಿಂದ ಬರುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಅನೇಕ ಸಲ ಬಸ್ಸುಗಳನ್ನು ತಪ್ಪಿಸಿಕೊಂಡಿದ್ದಾರೆ. ಕೇವಲ ಜಾಹಿರಾತುಗಳನ್ನು ದೊಡ್ಡ ಶಬ್ದದಲ್ಲಿ ಹಾಕವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ.

ಆಗಾಗ ಬಣ್ಣ ಮಾತ್ರ ಬಳಿಸುತ್ತಾರೆ: ಬಸ್‌ ನಿಲ್ದಾಣದ ಬಣ್ಣ ಮಾತ್ರ ಆಗಾಗ ಬದಲಿಸಲಾಗುತ್ತದೆ. ಬಣ್ಣ ಬದಲಿಸುವ ಅಧಿ ಕಾರಿಗಳು, ಇಲಾಖೆಯವರು ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಂಗವಿಕಲರಿಗೆ ಕರೆದೊಯ್ಯಲು ವ್ಯವಸ್ಥೆ ಇಲ್ಲ. ಸಿಸಿ ಕ್ಯಾಮೆರಾ ಕೆಟ್ಟಿದ್ದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಅನೇಕ ಸಮಸ್ಯೆಗಳು ಇಲ್ಲಿವೆ. ಬಸ್‌ ನಿಲ್ದಾಣದ ಬಣ್ಣ ಬದಲಿಸುವ ಇಲಾಖೆಗೆ ಇಲ್ಲಿನ ಸಮಸ್ಯೆಗಳು ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸುವಂತಾಗಿದೆ. ಹೀಗಾಗಿ ಆದಷ್ಟು ಬೇಗ ಬಸ್‌ ನಿಲ್ದಾಣದ ಸಮಸ್ಯೆಗಳತ್ತ ಅಧಿಕಾರಿಗಳು, ಇಲಾಖೆಯವರು ಗಮನ ಹರಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕೇವಲ ಬಣ್ಣ ಬದಲಿಸುವುದರಿಂದ ಸಮಸ್ಯೆ ಬಗೆ ಹರಿಯಲ್ಲ. ಬಸ್‌ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕ್ಯಾಮೆರಾ ಅಳವಡಿಸಿ, ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸವನ್ನು ಸಂಬಂಧ ಪಟ್ಟವರು ಮಾಡಲಿ.
ಪ್ರಯಾಣಿಕರು

ಕ್ಯಾಮೆರಾ ಕೆಟ್ಟಿದ್ದರ ಬಗ್ಗೆ ಮೇಲಾಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೇ ಅವುಗಳನ್ನು ದುರಸ್ತಿಗಾಗಿ ನೀಡಲಾಗಿದೆ. ದುರಸ್ತಿಯಾದ ಬಳಿಕ ಕ್ಯಾಮೆರಾ ಅಳವಡಿಸಲಾಗುತ್ತದೆ. ಅಲ್ಲದೆ ಬಸ್‌ ನಿಲ್ದಾಣದಲ್ಲಿ ಸೌಲಭ್ಯಗಳನ್ನು ನೀಡಲು ಗಮನ ಹರಿಸಲಾಗುವುದು.
ಜಿ.ಆರ್‌. ಕುಲಕರ್ಣಿ,
ಬಸ್‌ ಘಟಕ ವ್ಯವಸ್ಥಾಪಕ, ಅಫಜಲಪುರ

Advertisement

Udayavani is now on Telegram. Click here to join our channel and stay updated with the latest news.

Next