ಅಫಜಲಪುರ: ಇನ್ನೂ ಹದಿನೈದು ದಿನದಲ್ಲಿ ಮಳೆಯಾಗದಿದ್ದರೆ ಭಾಗ್ಯವಂತಿ ದೇವಿ ಪೂಜೆಗೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.
ತಾಲೂಕಿನ ಘತ್ತರಗಿಯಲ್ಲಿರುವ ಪುಣ್ಯಕ್ಷೇತ್ರ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರು ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಆದರೆ ನದಿಯಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದರಿಂದ ಪುಣ್ಯಸ್ನಾನ ಮಾತ್ರವಲ್ಲ ಕುಡಿಯಲು ಸಹ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗ್ಯವಂತಿ ದೇವಿಗೂ ಸಹ ನದಿ ನೀರಿನಿಂದಲೇ ಪವಿತ್ರ ಪೂಜೆ ಮಾಡಲಾಗುತ್ತದೆ. ಆದರೆ ನದಿಯಲ್ಲಿ ನೀರಿಲ್ಲದ್ದರಿಂದ ಪೂಜೆಗೂ ಕಷ್ಟ ಪಡುವಂತಾಗಿದೆ. ಹೀಗಾಗಿ ಹದಿನೈದು ದಿನದಲ್ಲಿ ಮಳೆಯಾಗದಿದ್ದರೆ ಭಾಗ್ಯವಂತಿಯ ಪೂಜೆಗೂ ನೀರಿಲ್ಲದಂತಾಗಲಿದೆ.
ಘತ್ತರಗಿ ಭಾಗ್ಯವಂತಿ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ದೇವಸ್ಥಾನದಲ್ಲಿ ದೇವಿ ಪೂಜೆಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ. ಪೂಜೆಗೆ ಹಾಗೂ ಇಲ್ಲಿಗೆ ಬರುವ ಭಕ್ತರಿಗೆ ನೀರಿನ ವ್ಯವಸ್ಥೆ ಹೇಗೆ ಮಾಡುತ್ತದೆ ಎಂದು ಭಕ್ತರು ಹಾಗೂ ಘತ್ತರಗಿ ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.
ಭೀಮಾ ನದಿಯಲ್ಲಿ ಎಷ್ಟು ಆಳಕ್ಕೆ ಅಗೆದರೂ ನೀರು ಬರುತ್ತಿಲ್ಲ. ಅಂತರ್ಜಲ ಮಟ್ಟ ತೀರಾ ಕುಸಿದು ಹೋಗಿದೆ. ಹೀಗಾಗಿ ಘತ್ತರಗಿಯಲ್ಲಿ ನೀರಿಗೆ ಬರ ಬಂದಿದೆ. ಸದ್ಯ ಭಾಗ್ಯವಂತಿ ದೇವಸ್ಥಾನದ ದಾಸೋಹ ಮಂದಿರ ಹೊರತುಪಡಿಸಿ ಉಳಿದೆಲ್ಲೆಡೆ ನೀರಿನ ಸಮಸ್ಯೆ ತಲೆದೋರಿದೆ. ಭೀಮೆಗೆ ಪ್ರತಿ ವರ್ಷ ನೀರಿನ ಕೊರತೆ ಕಾಡುತ್ತಿದೆ. ಘತ್ತರಗಿಯಲ್ಲಿ ನಿರ್ಮಿಸಲಾಗಿರುವ ಬ್ರೀಜ್ ಕಂ ಬ್ಯಾರೇಜ್‌ನ ಗೇಟ್‌ಗಳು ಸರಿಯಾಗಿ ದುರಸ್ತಿ ಮಾಡಿಸಿ ನೀರು ಹಿಡಿದಿಟ್ಟರೆ ಬೇಸಿಗೆಯಲ್ಲಿ ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ. ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ, ತಾಲೂಕು ಆಡಳಿತ, ಶಾಸಕರು, ಗ್ರಾಪಂ ಹಾಗೂ ಜನಪ್ರತಿನಿಧಿಗಳು ಯಾವ ರೀತಿಯ ಕ್ರಮ ಕೈಗೊಂಡು ನೀರಿನ ವ್ಯವಸ್ಥೆ ಕಲ್ಪಿಸುತ್ತಾರೋ ಕಾದು ನೋಡಬೇಕಾಗಿದೆ.
ನಾವು ದೂರದ ಊರುಗಳಿಂದ ಸುಡು ಬಿಸಿಲಲ್ಲಿ ಭಾಗ್ಯವಂತಿ ದರ್ಶನಕ್ಕೆ ಬಂದರೆ ಇಲ್ಲಿ ಕುಡಿಯಲು ನೀರಿನ ಸಮಸ್ಯೆ ಇದೆ. ನಾವು ಹಣ ಕೊಟ್ಟು ಬಾಟಲ್ ನೀರು ಕುಡಿಯಬೇಕಾದ ಪರಿಸ್ಥಿತಿ ಇದೆ. ಸಂಬಂಧ ಪಟ್ಟವರು ಕೂಡಲೇ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಭಾಗ್ಯವಂತಿ ದೇವಸ್ಥಾನದ ನೀರಿನ ಸಮಸ್ಯೆ ಬಗ್ಗೆ ಅಲ್ಲಿನ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಮೇ 23ರಿಂದಲೇ ಒಂದು ಟ್ಯಾಂಕರ್ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು.
•
ಮಧುರಾಜ್ ಕೂಡಲಗಿ,
ತಹಶೀಲ್ದಾರ್ ಅಫಜಲಪುರ
ಶುಕ್ರವಾರಕ್ಕೊಮ್ಮೆ ದೇವಿ ವಿಶೇಷ ದಿನ ಇರುವುದರಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಶುಕ್ರವಾರಕ್ಕೊಮ್ಮೆ ಎರಡು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ದಿನಾಲು ಒಂದು ಟ್ಯಾಂಕರ್ ನೀರಿನ ಅವಶ್ಯಕತೆ ಇದೆ. ಒಂದು ಟ್ಯಾಂಕರ್ ನೀರು ತಂದರೆ ಸಮಸ್ಯೆ ಇರುವುದಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗೆ ಮನವಿ ಮಾಡಿದ್ದೇನೆ.
•ಕೆ.ಜಿ. ಬಿರಾದಾರ,
ದೇವಸ್ಥಾನದ ಆಡಳಿತಾಕಾರಿ ಘತ್ತರಗಾ
ಮಲ್ಲಿಕಾರ್ಜುನ ಹಿರೇಮಠ