•ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಯಾವುದೇ ಸರ್ಕಾರಿ ಇಲಾಖೆ, ಕಚೇರಿಗೆ ನೀತಿ, ನಿಯಮ ಇರುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ಎಲ್ಲೆಂದರಲ್ಲಿ ಕಸ, ಉಗುಳು, ಬೇಕಾಬಿಟ್ಟಿ ದಾಖಲೆಗಳನ್ನಿಟ್ಟು ಜನಸಾಮಾನ್ಯರನ್ನು ಸತಾಯಿಸುವಂತಹ ಡಸ್ಟಬಿನ್ ತರಹದ ಕಚೇರಿ ಯಾವುದಾದರೂ ಇದ್ದರೇ ಅದೇ ಅಫಜಲಪುರ ತಹಶೀಲ್ದಾರ್ ಕಚೇರಿ.
ಪಟ್ಟಣದ ವಿಜಯಪುರ ಹೆದ್ದಾರಿಗೆ ಹೊಂದಿಕೊಂಡಿರುವ ತಹಶೀಲ್ದಾರ್ ಕಚೇರಿ ಹೊರಗಿನಿಂದ ದೊಡ್ಡ ಬಂಗಲೆಯಂತೆ ಕಾಣುತ್ತದೆ. ಒಳಗೆ ಹೋದರೆ ಮಾತ್ರ ಅಕ್ಷರಶಃ ಕೊಳಕಿನ ದರ್ಶನ ಆಗುತ್ತದೆ. ಎಲ್ಲಿ ನೋಡಿದರೂ ಕೊಳಕು ಕಾಣುತ್ತದೆ.
ಎಲ್ಲೆಂದರಲ್ಲಿ ದಾಖಲೆಗಳು: ತಹಶೀಲ್ದಾರ್ ಕಚೇರಿಯಲ್ಲಿ ಎಲ್ಲೆಂದರಲ್ಲಿ ಉಗುಳಿದರೂ ಕೇಳವವರಿಲ್ಲ. ಅದರಲ್ಲೂ ಇಲಾಖೆ ಗೋಡೆಗಳ ಮೂಲೆಗಳು ಉಗುಳಲಿಕ್ಕೆ ಮಾಡಿದಂತೆ ಆಗಿವೆ. ಇಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕುಳಿತು ಕೊಳ್ಳುವಂತಾಗಿದೆ. ಕಚೇರಿ ದಾಖಲೆಗಳನ್ನು ಎಲ್ಲಿ ಬೇಕೋ ಅಲ್ಲಿ ಇಡಲಾಗಿದೆ. ಹೀಗಾಗಿ ದಾಖಲೆಗಳನ್ನು ದಿನವಿಡಿ ಹುಡುಕುವುದೇ ಕೆಲಸ ವಾಗಿದೆ. ಅಲ್ಲದೇ ತಾಲೂಕಿನ ಹಳ್ಳಿಗಳಿಂದ ಬರುವ ಜನರಿಗೆ ಕುಡಿಯುವ ನೀರಿನ ಸೌಕರ್ಯವಿಲ್ಲ. ಕುಳಿತುಕೊಳ್ಳಲು ಆಸನಗಳಿಲ್ಲ. ಸಿಕ್ಕಸಿಕ್ಕಲ್ಲಿ ಕುಳಿತು ಕೆಲಸ ಮಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ.