ಅಫಜಲಪುರ: ಸುಡು ಬೇಸಿಗೆ ನೆತ್ತಿ ಸುಡುತ್ತಿದ್ದರೂ ಚವಡಾಪುರ ಗ್ರಾಮಸ್ಥರು ನೀರಿಗಾಗಿ ನಿತ್ಯ ಅಲೆದಾಡುವಂತಾಗಿದೆ.
ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಜಲ ಮೂಲಗಳೆಲ್ಲ ಖಾಲಿಯಾಗಿವೆ. ಹೀಗಾಗಿ ಗ್ರಾಮಸ್ಥರು ಹೊಲ-ಗದ್ದೆಗಳಲ್ಲಿರುವ ತೆರೆದ ಬಾವಿ, ಕೊಳವೆ ಬಾವಿಗಳನ್ನು ಅರಸಿ ಸುಡು ಬಿಸಿಲಿನಲ್ಲಿಯೇ ಸುತ್ತಾಡಿ ನೀರು ತರುವ ಪರಿಸ್ಥಿತಿ ಬಂದೊದಗಿದೆ.
ಇದ್ದು ಇಲ್ಲದಂತಿರುವ ಬಾವಿಗಳು: ಗ್ರಾಮದಲ್ಲಿ 20 ಕೊಳವೆ ಬಾವಿಗಳಿವೆ. ಇವುಗಳ ಪೈಕಿ ಏಳರಲ್ಲಿ ಮಾತ್ರ ನೀರು ಬರುತ್ತಿದೆ. ಅದು ಹತ್ತೆಂಟು ಕೊಡ ಮಾತ್ರ. ಉಳಿದವು ಸ್ಥಗಿತವಾಗಿವೆ. ಅಲ್ಲದೇ ಗ್ರಾಮದಲ್ಲಿನ ಆರು ತೆರೆದ ಬಾವಿಗಳು ಅಂತರ್ಜಲಮಟ್ಟ ಕುಸಿತದಿಂದ ಒಣಗಿವೆ.
ವಿದ್ಯುತ್ ಇದ್ದರೆ ನೀರು: ಅಲ್ಪಸ್ವಲ್ಪ ನೀರು ಇರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಇಲ್ಲದಿದ್ದರೆ ಹೊಲ ಗದ್ದೆಗಳಿಗೆ ಅಲೆದಾಡುವುದೆ ಗ್ರಾಮಸ್ಥರ ನಿತ್ಯ ಕಾಯಕವಾಗಿದೆ.
ಖರೀದಿಸಿದ ನೀರು ಸಾಕಾಗುತ್ತಿಲ್ಲ: ಗ್ರಾಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸ್ಥಳಿಯ ಚವಡಾಪುರ ಗ್ರಾಮ ಪಂಚಾಯಿತಿ ಆಡಳಿತ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಬಳಿಯಿಂದ ಕೊಳವೆ ಬಾವಿ ನೀರನ್ನು ತಿಂಗಳಿಗೆ 25 ಸಾವಿರ ರೂ. ಪಾವತಿಸಿ ಖರೀದಿಸಿ, ಗ್ರಾಮಕ್ಕೆ ಸರಬರಾಜು ಮಾಡುತ್ತಿದೆ. ಆದರೆ ಖರೀದಿಸಿದ ನೀರು ಸಾಕಾಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಹೊಲ-ಗದ್ದೆ ಅಲೆಯವುದು ತಪ್ಪಿಲ್ಲ. ಗ್ರಾಮದ ಭೋವಿ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. ಸಂಬಂಧಪಟ್ಟವರು ಭೋವಿ ಓಣಿಗೆ ನೀರಿನ ಸೌಕರ್ಯ ಕಲ್ಪಿಸಬೇಕೆಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.
ಸಮರ್ಪಕ ನೀರು ಪೂರೈಸಿ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿದೆ. ಗ್ರಾ.ಪಂ. ಕೇವಲ ಒಂದೇ ಒಂದು ಕೊಳವೆ ಬಾವಿ ಮಾಲೀಕರಿಗೆ ಹಣ ಪಾವತಿಸಿ ನೀರು ಪೂರೈಸುತ್ತಿದೆ. ಈ ನೀರು ಸಾಕಾಗುತ್ತಿಲ್ಲ. ಇನ್ನೊಂದೆರಡು ಕೊಳವೆ ಬಾವಿ ನೀರನ್ನು ಖರೀದಿಸಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಗ್ರಾಮದ ಮುಖಂಡ ಸುಭಾಷ ಲಿಂಗಶೆಟ್ಟಿ ಮನವಿ ಮಾಡಿದ್ದಾರೆ.
ಗ್ರಾಮದ ಹೊಸ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದೆ. ಅಲ್ಲೊಂದು ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತದೆ. ಉಳಿದಂತೆ ಗ್ರಾಮದಲ್ಲಿ ನೀರಿನ ಸರಬರಾಜು ಸಮರ್ಪಕವಾಗಿ ಮಾಡಲಾಗುತ್ತಿದೆ.
•ಸೈಯದ್ ಪಟೇಲ್,
ಪಿಡಿಒ, ಚವಡಾಪುರ