Advertisement

ಅನುಕೂಲವಾಗಲಿಲ್ಲ ನೀರಿನ ಯೋಜನೆ 

11:44 AM Mar 13, 2019 | Team Udayavani |

ಅಫಜಲಪುರ: ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬಹುಗ್ರಾಮ ಕುಡಿಯುವ ನೀರು ಯೋಜನೆ ರೂಪಿಸಿದೆ. ಆದರೆ ಆ ಯೋಜನೆಯಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ.

Advertisement

ಪುಢಾರಿಗಳ ಮನೆಗೆ ಪೈಪಲೈನ್‌: ತಾಲೂಕಿನ ಆನೂರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕ ಸ್ಥಾಪಿಸಲಾಗಿದೆ. ಆನೂರ, ಮಲ್ಲಾಬಾದ, ಮಾತೋಳಿ ಸೇರಿದಂತೆ ಇತರ ಗ್ರಾಮಗಳಿಗೆ ನೀರು ಪೂರೈಸಬೇಕಾದ ಯೋಜನೆ ಇದಾಗಿದೆ. ಮಲ್ಲಾಭಾದ, ಮಾತೋಳಿ ಗ್ರಾಮಗಳಿಗೆ ಪೈಪಲೈನ್‌ ಕಾಮಗಾರಿ ಪೂರ್ಣವಾಗಿದೆ. ಕೆಲವು ಕಡೆ ಸಾರ್ವಜನಿಕ ನಳಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಸಾರ್ವಜನಿಕ ನಳಗಳಲ್ಲಿ ರಾತ್ರಿ 12 ಗಂಟೆಗೆ ನೀರು ಸರಬರಾಜು ಆಗುತ್ತಿದೆ. ಇದರಿಂದ ಜನಸಾಮಾನ್ಯರು ರಾತ್ರಿ ನಿದ್ದೆಗೆಟ್ಟು ನೀರಿಗಾಗಿ ಅಲೆದಾಡುವಂತೆ ಆಗಿದೆ. ಅಲ್ಲದೇ ಪೈಪಲೈನ್‌ ವ್ಯವಸ್ಥೆಯನ್ನು ಕೆಲ ರಾಜಕೀಯ ಪ್ರಭಾವ ಇರುವ ಪುಢಾರಿಗಳ ಮನೆಗಳ ಬಳಿ ಹಾಕಲಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸರಿಯಾಗಿ ನೀರು ಸಿಗುತ್ತಿಲ್ಲ.

ರಾತ್ರಿ ನಿದ್ದೆಗೆಟ್ಟು ಪಾಳಿ ನಿಲ್ಲಬೇಕು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಹಗಲಿನಲ್ಲಿ ಸರಬರಾಜು ಆದರೆ ಗ್ರಾಮಸ್ಥರಿಗೆ ಅನುಕೂಲ ಆಗುತ್ತಿತ್ತು. ಆದರೆ ರಾತ್ರಿ 12 ಗಂಟೆಗೆ ನೀರು ಬರುತ್ತಿದೆ.

ಹೀಗಾಗಿ ಹಗಲಿನಲ್ಲಿ ನೀರಿಗಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ಎಲ್ಲರೂ ಹೊಲ, ಗದ್ದೆಗಳಿಗೆ ಅಲೆದಾಡಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ರಾತ್ರಿ ನೀರು ಬರುತ್ತಿದೆ. ಹೀಗಾಗಿ ರಾತ್ರಿ ನಿದ್ದೆಗೆಟ್ಟು ನೀರಿಗಾಗಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಸಮರ್ಪಕ ನೀರು ಪೂರೈಸಲು ಒತ್ತಾಯ: ಮಳೆ ಕೊರತೆಯಿಂದ ಎಲ್ಲೆಲ್ಲೂ ನೀರಿನ ಬವಣೆ ಶುರುವಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಸಫಲವಾಗುತ್ತಿಲ್ಲ. ಹೀಗಾಗಿ ಸಂಬಂಧ ಪಟ್ಟವರು ಸಮರ್ಪಕ ನೀರು ಪೂರೈಕೆ ಮಾಡಲಿ. ಬರಗಾಲ ಇರುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಮಲ್ಲಾಭಾದ, ಮಾತೋಳಿ, ಚಿಂಚೋಳಿ ಗ್ರಾಮಗಳ ಜನ ಆಗ್ರಹಿಸುತ್ತಿದ್ದಾರೆ.

Advertisement

ಅಧ್ಯಕ್ಷ, ಉಪಾದ್ಯಕ್ಷ ಹಾಗೂ ಗ್ರಾ.ಪಂ ಸದಸ್ಯರ ಸಭೆ ನಡೆಸಿ ಪ್ರಭಾವಿಗಳ ಮನೆಗಳ ಮುಂದಿನ ಅನ ಧಿಕೃತ ನಲ್ಲಿಗಳ ಸಂಪರ್ಕ ಕಡಿತಗೊಳಿಸಿ ಗ್ರಾಮಸ್ಥರಿಗೆ ಸಮರ್ಪಕ ನೀರು ಪೂರೈಸುವ ಕೆಲಸ ಮಾಡಲಾಗುತ್ತದೆ. ರಾತ್ರಿ ವೇಳೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ. ಹಗಲಿನಲ್ಲಿ ನೀರು ಸರಬರಾಜು ಮಾಡುವಂತೆ ಮನವಿ ಮಾಡಲಾಗಿದೆ.
. ರವಿ ಸಣದಾನಿ, 
ಅಭಿವೃದ್ಧಿ ಅಧಿಕಾರಿ, ಮಲ್ಲಾಬಾದ ಗ್ರಾ.ಪಂ.

ಕೆಲಸಕ್‌ ಬರಲಾರ್ದ್  ನಳ ಕೂಡಸ್ಯಾರ್‌. ಮೂರ್‍ನಾಲ್ಕ ದಿನಕ್ಕೊಮ್ಮೆ ರಾತ್ರಿ ಬಾರಾಕ್‌ ನೀರ್‌ ಬರ್ತಾವ್‌. ನಾವ್‌ ಮನಿ-ಮಠ, ಮಕ್ಕಳ ಬಿಟ್ಟು ನೀರಿಗಾಗಿ ನಿದ್ದಿಗೆಟ್ಟು ನಿಂದ್ರಾದು ನಡದಾದ್ರಿ. ನಮಗ ನೀರ ಕೊಟ್ರ ಬಾಳ ಪುಣ್ಯ ಸಿಗ್ತದ ನೋಡ್ರಿ. 
. ಅಂಬವ್ವ ದೊಡ್ಮನಿ, ಪರಿಶಿಷ್ಟ
   ಬಡಾವಣೆ ಮಹಿಳೆ 

‌ಪ್ರಭಾವಿಗಳ ಮನೆಗಳಿಗೆ ಅನಧಿಕೃತ ನಲ್ಲಿಗಳ ಸಂಪರ್ಕವಿದ್ದಲ್ಲಿ ಪಿಡಿಒ ಅವುಗಳ ಕಡಿತಕ್ಕೆ ಮುಂದಾಗಬೇಕು. ನೀರಿನ ಸಮಸ್ಯೆ ಹೆಚ್ಚಾಗಿದ್ದರೆ ನಮ್ಮ ಗಮನಕ್ಕೆ ಸಮಸ್ಯೆ ಬಂದರೆ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
. ರಮೇಶ ಸುಲ್ಪಿ ಪ್ರಭಾರಿ ತಾ.ಪಂ
ಇಒ, ಅಫಜಲಪುರ 

ಮಲ್ಲಿಕಾರ್ಜುನ ಹಿರೇಮಠ 

Advertisement

Udayavani is now on Telegram. Click here to join our channel and stay updated with the latest news.

Next