Advertisement

ಭೀಮೆಗೆ ಹರಿದು ಬಂದಳು ಕೃಷ್ಣೆ

09:45 AM Aug 02, 2019 | Naveen |

ಅಫಜಲಪುರ: ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಭೀಕರ ಬರಗಾಲ ಎದುರಾಗಿತ್ತು. ಈಗ ಮಳೆಗಾಲ ಆರಂಭವಾಗಿದ್ದರೂ ಮಳೆ ಕೊರತೆ ಕಾಡುತ್ತಿದೆ. ತಾಲೂಕಿನ ಜೀವನದಿ ಆಗಿರುವ ಭೀಮೆಗೆ ನೀರಿನ ಬರ ಎದುರಾಗಿತ್ತು. ಆದರೀಗ ಕೃಷ್ಣಾ ನದಿ ತುಂಬಿ ಕಾಲುವೆಗಳಿಂದ ಹರಿದು ಭೀಮೆಗೆ ಬಂದಿದ್ದರಿಂದ ಭಾಗ್ಯವಂತಿ ಭಕ್ತರಿಗೆ ಪುಣ್ಯಸ್ನಾನ ಮಾಡುವ ಭಾಗ್ಯ ಲಭಿಸಿದೆ.

Advertisement

ಕಳೆದ ವರ್ಷ ಭೀಕರ ಬರಗಾಲ ಸೃಷ್ಟಿ ಆಗಿದ್ದರಿಂದ ಜನ-ಜಾನುವಾರುಗಳಿಗೆ ಮಾತ್ರವಲ್ಲದೇ ದೇವರಿಗೂ ನೀರಿನ ಬಿಸಿ ತಟ್ಟಿತ್ತು. ತಾಲೂಕಿನ ಘತ್ತರಗಿಯ ಭಾಗ್ಯವಂತಿ ದೇವಿ, ದೇವಲ ಗಾಣಗಾಪುರದ ದತ್ತಾತ್ರೇಯ, ಮಣ್ಣೂರಿನ ಯಲ್ಲಮ್ಮ ದೇವಿ, ಎರಡನೇ ಶ್ರೀಶೈಲ ಎಂದು ಹೆಸರಾಗಿರುವ ಚಿನ್ಮಳ್ಳಿಯ ಮಲ್ಲಿಕಾರ್ಜುನ ದೇವರ ಪೂಜೆಗೆ ನೀರಿಲ್ಲದಂತೆ ಆಗಿತ್ತು.

ಭಾಗ್ಯವಂತಿ ದೇವಿ ಭಕ್ತರು ಭೀಮಾ ನದಿಯಲ್ಲಿ ನೀರಿಲ್ಲದ್ದರಿಂದ ಗ್ರಾಮಸ್ಥರು ಬಳಸಿ ಬಿಟ್ಟ ಚರಂಡಿ ನೀರಲ್ಲೇ ಪುಣ್ಯಸ್ನಾನ ಮಾಡುವಂತಾಗಿತ್ತು. ಈಗ ಕೃಷ್ಣಾ ನೀರು ಭೀಮೆಗೆ ಬಂದಿದ್ದರಿಂದ ಭಕ್ತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸಂತಸ: ಕಳೆದ ವರ್ಷ ಉಂಟಾದ ಜಲಕ್ಷಾಮದಿಂದ ಭೀಮಾ ನದಿ ಅಕ್ಷರಶಃ ಒಣಗಿತ್ತು. ನದಿ ಒಣಗಿದ್ದರಿಂದ ಜಲಚರಗಳು, ಜನ-ಜಾನುವಾರುಗಳಿಗೆಲ್ಲ ನೀರಿನ ಅಭಾವ ಸೃಷ್ಟಿಯಾಗಿತ್ತು. ಜನಸಾಮಾನ್ಯರು, ದನಕರುಗಳಿಗೆ ಮಾತ್ರವಲ್ಲದೇ ದೇವರಿಗೂ ಬರದ ಬಿಸಿ ತಟ್ಟಿತ್ತು. ಭಾಗ್ಯವಂತಿ ದೇವಿ ಪೂಜೆಗೂ ನೀರಿಲ್ಲದಂತೆ ಆಗಿತ್ತು. ದೇವಸ್ಥಾನದ ಪೂಜಾರಿಗಳು ನದಿಯಲ್ಲಿ ಹೊಂಡ ತೋಡಿದರೂ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೀಗ ಸಮೃದ್ಧವಾಗಿ ಮಳೆ ಬಂದು ನದಿ ತುಂಬದಿದ್ದರೂ ನಾರಾಯಣಪುರ ಜಲಾಶಯ ಮತ್ತು ಕಾಲುವೆಗಳಿಂದ ಹರಿ ಬಿಟ್ಟ ನೀರು ಭೀಮೆಗೆ ಬಂದು ಸೇರಿದೆ. ಹೀಗಾಗಿ ಭಾಗ್ಯವಂತಿ ದೇವಿ ಪೂಜೆಗೆ ಮತ್ತು ದೇವಿ ಭಕ್ತರಿಗೆ ಪುಣ್ಯಸ್ನಾನ ಮಾಡಲು ನೀರು ದೊರಕಿ ಸಂತಸವಾಗಿದೆ.

Advertisement

ಅಫಜಲಪುರ ತಾಲೂಕಿನಲ್ಲಿ ಮೋಡವಾಗುತ್ತಿದೆ, ಮಳೆಯಾಗುತ್ತಿಲ್ಲ. ಭೀಮೆಗೆ ಮಹಾರಾಷ್ಟ್ರದಿಂದ ನೀರು ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ. ಭೀಮಾ ನದಿ ಈ ಬಾರಿಯೂ ಒಣಗಿದರೆ ಬಹಳಷ್ಟು ಸಮಸ್ಯೆ ಆಗುತ್ತದೆ.
ಎಂ.ವೈ. ಪಾಟೀಲ,
 ಶಾಸಕರು, ಅಫಜಲಪುರ

ಹೆಚ್ಚಿದ ಭಕ್ತರ ಸಂಖ್ಯೆ
ಹುಣ್ಣಿಮೆ, ಅಮವಾಸ್ಯೆ ಸಂದರ್ಭದಲ್ಲಿ ಭಾಗ್ಯವಂತಿ ದೇವಿ ದರ್ಶನಕ್ಕೆಂದು ಬಂದಿದ್ದ ಭಕ್ತರು ನದಿಯಲ್ಲಿ ನೀರಿಲ್ಲದ್ದನ್ನು ಕಂಡು ಸಾಕಷ್ಟು ಮರುಗಿದ್ದರು. ಹೀಗಾಗಿ ಭಾಗ್ಯವಂತಿ ದೇವಿ, ದತ್ತಾತ್ರೇಯ, ಮಣೂರ ಯಲ್ಲಮ್ಮ, ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯೂ ಕಮ್ಮಿಯಾಗಿತ್ತು. ಆದರೀಗ ನದಿಯಲ್ಲಿ ನೀರು ಬರಲಾರಂಭಿಸಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಲ್ಲದೇ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ಸಮಸ್ಯೆ
ಮಹಾರಾಷ್ಟ್ರದಲ್ಲಿ ಮಳೆಯಾದರೂ ಅಲ್ಲಿನ ಯಾವ ಜಲಾಶಯದಿಂದಲೂ ಭೀಮೆಗೆ ನೀರು ಹರಿದು ಬಂದಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಅಫಜಲಪುರ ತಾಲೂಕಿನಲ್ಲಿ ಸಾಕಷ್ಟು ಮಳೆ ಕೊರತೆ ಇದೆ. ಮಹಾರಾಷ್ಟ್ರದಿಂದ ಭೀಮೆಗೆ ನೀರು ಹರಿದು ಬರದೇ ಇದ್ದರೆ ಮುಂಬರುವ ಬೇಸಿಗೆಯಲ್ಲಿ ಮತ್ತಷ್ಟು ಸಮಸ್ಯೆ ಆಗುವುದು ಪಕ್ಕಾ. ಈ ನಿಟ್ಟಿನಲ್ಲಿ ಸರ್ಕಾರ, ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ. ಈಗ ನದಿಯಲ್ಲಿ ಸ್ವಲ್ಪ ನೀರು ಬಂದಿದ್ದರಿಂದ ಭಕ್ತರಿಗೆ ಸಂತಸವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next