ಅಫಜಲಪುರ: ಸತತ ಬರದಿಂದ 40ಕ್ಕೂ ಹೆಚ್ಚಿನ ಡಿಗ್ರಿಯಲ್ಲಿ ಬಿಸಿಲು ಸುಡುತ್ತಿದೆ. ಹೀಗಾಗಿ ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ಸಾಮಾನ್ಯರು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನಾದ್ಯಂತ ಈಗ ನೀರು ನೆರಳಿಗಾಗಿ ಪರದಾಟ ಶುರುವಾಗಿದೆ. ಎಲ್ಲಿ ನೋಡಿದರೂ ಜನ ಸಾಮಾನ್ಯರು, ಜಾನುವಾರುಗಳೆಲ್ಲ ನೀರಿಗಾಗಿ ಮತ್ತು ನೆರಳಿಗಾಗಿ ಪರಿತಪಿಸುವಂತಾಗಿದೆ. ನದಿ, ಹಳ್ಳ, ಹೊಳೆ, ಕೊಳವೆ ಬಾವಿ, ತೆರೆದ ಬಾವಿ, ಕೆರೆ ತೊರೆಗಳೆಲ್ಲ ನೀರಿಲ್ಲದೆ ಖಾಲಿಯಾಗಿವೆ. ಅದರಂತೆ ಎಲ್ಲ ಗಿಡ-ಮರ ಕೂಡ ನೆರಳು ನೀಡುತ್ತಿಲ್ಲ. ಹೀಗಾಗಿ ಜನ-ಜಾನುವಾರುಗಳಿಗೆ ಈಗ ನೀರು, ನೆರಳು ಹುಡುಕಿ ವಿಶ್ರಾಂತಿ ಪಡೆಯುವುದು ನಿತ್ಯದ ಕಾಯಕವಾಗಿದೆ.
ನೆರಳಲ್ಲಿ ಮಲಗುತ್ತಿರುವ ಜನಸಾಮಾನ್ಯರು: ಗ್ರಾಮಗಳಿಂದ ನಗರ ಪ್ರದೇಶ ಸೇರಿದಂತೆ ಎಲ್ಲ ಕಡೆ ಬೆಳಿಗ್ಗೆ ಎದ್ದು ಜನ ಸಾಮಾನ್ಯರು ತಮ್ಮ ದೈನಂದಿನ ಕೆಲಸ ಮುಗಿಸಿ ಊಟ ಮಾಡಿಕೊಂಡು ನೆರಳಿದ್ದ ಕಡೆಗೆ ಹೋಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ನೀರು, ನೆರಳಿದ್ದರೆ ಸಾಕಪ್ಪ ಎನ್ನುವ ಮಟ್ಟಕ್ಕೆ ಜನರ ಮನಸ್ಥಿತಿ ಬದಲಾಗಿದೆ. ಈಗ ಎಲ್ಲಿ ನೋಡಿದರೂ ನೆರಳಿರುವ ಕಡೆಯಲ್ಲಿ ಜನ ಮಲಗಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಅದರಲ್ಲೂ ದೊಡ್ಡ ಮರ, ದೇವಸ್ಥಾನಗಳ ಕಟ್ಟೆಗಳಲ್ಲಿ ಜನ ಮಲಗುವುದು ಸಾಮಾನ್ಯವಾಗಿದೆ.
ಬಿಕೋ ಎನ್ನುತ್ತಿವೆ ರಸ್ತೆಗಳು: ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಜನ ನಿತ್ಯ ಓಡಾಟ ಮಾಡುತ್ತಿದ್ದರು. ಆದರೆ ಈಗ ಸುಡು ಬಿಸಿಲಿಗೆ ಅಂಜಿ ರಸ್ತೆಗೆ ಇಳಿಯುತ್ತಿಲ್ಲ. ತಮ್ಮ ವಾಹನಗಳನ್ನು ಒಂದೆಡೆ ನಿಲ್ಲಿಸಿ ನೆರಳಿರುವಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ವಾಹನಗಳ ಓಡಾಟ ಇಲ್ಲದ್ದರಿಂದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ.
ತಂಪು ಪಾನಿಯಗಳ ಮೊರೆ ಹೋದ ಜನ: ಇನ್ನೂ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜನ ತಂಪು ಪಾನಿಯಗಳ ಮೊರೆ ಹೋಗಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲವು ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಜನ ಹಣ ಕೊಟ್ಟು ಬಾಟಲಿ ನೀರು ಕುಡಿದು ಸುಮ್ಮನಾಗುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಸುಡು ಬಿಸಿಲಿಗೆ ಜನ-ಜಾನುವಾರುಗಳು ಹೆದರಿ ನೆರಳು ಹಿಡಿದಿದ್ದಾರೆ.
ಬಿಸಲಾಗ್ ಎಲ್ಲಿಗಿ ಹೋಲಾಕು ಆಗ್ವಾಲ್ದು, ಏನ್ ಕೆಲಸ ಮಾಡ್ಲಾಕು ಆಗ್ವಾಲ್ದು, ಉರಿ ಬಿಸಿಲಿನ ಸಿಟ್ಟಿಗಿ ತಪ್ಪಿಸಿಕೊಳ್ಳಾಕ್ ಗಿಡದ ನೆಳ್ಳ, ಗುಡಿ ಕಟ್ಟಿ ಆಸ್ರ ಆಗ್ಯಾವ್ರಿ. ಅವು ಇಲ್ಲಾಂದ್ರ ಭಾಳ ಕಷ್ಟ ಆಗ್ತಿತ್ರಿ.
•
ಜೀವಪ್ಪ ದೊಡ್ಮನಿ,
ಬಡದಾಳ ಗ್ರಾಮಸ್ಥ
ಮಲ್ಲಿಕಾರ್ಜುನ ಹಿರೇಮಠ