ಅಫಜಲಪುರ: ತಾಲೂಕಿನಾದ್ಯಂತ ಮಳೆಗಾಲದ ಕೊರತೆ ಕಾಡುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ನದಿ ತುಂಬಿ ಹೆಚ್ಚಾದ ನೀರು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆ ಹಾಳಾಗಿದೆ. ಜಮೀನು ಮತ್ತು ಬೆಳೆ ಹಾಳಾಗಿದ್ದಕ್ಕೆ ರೈತರು ಕಣ್ಣೀರಿಡುವಂತಾಗಿದೆ.
ಪ್ರಸಕ್ತ ವರ್ಷದ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದರೂ ಬಿತ್ತನೆಗೆ ಅನುಕೂಲವಾಗುಷ್ಟು ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಹೀಗಾಗಿ ರೈತರು ಭರದಿಂದ ಬಿತ್ತನೆ ಮಾಡಿದ್ದರು. ಆದರೆ ಬಳಿಕ ಮಳೆ ಬಾರದೆ ಬೆಳೆಗಳು ಬಾಡಲು ಶುರುವಾಗಿದ್ದವು. ಇನ್ನೊಂದೆಡೆ ಭೀಮಾ ನದಿಯಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂದು ನದಿ ದಂಡೆಯ ಮಣ್ಣೂರ, ಹಿರಿಯಾಳ, ಕೂಡಿಗನೂರ, ಸೊನ್ನ, ಘತ್ತರಗಿ, ಉಮ್ಮರ್ಗಾ, ಚಿನಮಳ್ಳಿ, ಬಂದಡವಾಡ, ಟಾಕಳಿ, ದೇವಲ ಗಾಣಗಾಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ನೆರೆ ಹಾವಳಿಯಿಂದ ಜಮೀನುಗಳು ಹಾಗೂ ಊರುಗಳಿಗೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ನೂರಾರು ಎಕರೆ ಜಮೀನು ನಾಶ: ತಾಲೂಕಿನಲ್ಲಿ ಭೀಮಾ ಮತ್ತು ಅಮರ್ಜಾ ನದಿಗಳು ಹರಿಯುತ್ತಿವೆ. ಸದ್ಯ ಅಮರ್ಜಾ ನದಿ ಪಾತ್ರದಲ್ಲಿ ಮಳೆಯಾಗಿಲ್ಲ. ಆದ್ದರಿಂದ ನದಿ ಬರಿದಾಗಿದೆ. ಆದರೆ ಭೀಮಾ ನದಿ ಪರಿಸ್ಥಿತಿ ಭಿನ್ನವಾಗಿದೆ. ಮಳೆಯಾಗದಿದ್ದರೂ ಮಹಾರಾಷ್ಟ್ರದಲ್ಲಿ ಬಿದ್ದ ಮಳೆಯಿಂದ ಭೀಮಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಭೀಮಾ ನದಿ ದಂಡೆಯ ಊರುಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬಿತ್ತನೆ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಾಶವಾಗಿದೆ. ತೊಗರಿ, ಸೂರ್ಯಕಾಂತಿ, ಸಜ್ಜೆ, ಹೆಸರು, ಕಬ್ಬು, ಬಾಳೆ ಬೆಳೆಗಳು ನಾಶವಾಗಿ ರೈತರ ಚಿಂತೆಗೆ ಕಾರಣವಾಗಿದೆ.
ಮಳೆ ಕೊರತೆಯಿಂದಲೂ ಬೆಳೆ ಹಾಳು: ಮಹಾಮಳೆಯಿಂದ ಭೀಮಾ ನದಿಯಲ್ಲಿ ಪ್ರವಾಹ ಬಂದು ಬೆಳೆ ಹಾಳಾದರೆ, ತಾಲೂಕಿನ ಬಹುತೇಕ ಕಡೆಯಲ್ಲಿ ಮಳೆಯೇ ಬಂದಿಲ್ಲ. ಹೀಗಾಗಿ ಮಳೆ ಕೊರತೆಯಿಂದಲೂ ಸಾಕಷ್ಟು ಬೆಳೆ ಹಾಳಾಗುತ್ತಿದೆ. ತಾಲೂಕಿನಾದ್ಯಂತ ವಾರ್ಷಿಕ ವಾಡಿಕೆ ಮಳೆ 667.3 ಮಿ.ಮೀ ಆಗಬೇಕಾಗಿತ್ತು. ಜನವರಿಯಿಂದ ಜುಲೈ ಅಂತ್ಯದವರೆಗೆ 275.4 ಮಿ.ಮೀ ಮಳೆಯಾಗಬೇಕಿñತ್ತು. ಇದರಲ್ಲಿ ಕೇವಲ 226.1 ಮಿ.ಮೀ ಮಳೆಯಾಗಿದೆ. ಹೀಗಾಗಿ 49.3 ಮಿ.ಮೀ ಮಳೆ ಕೊರತೆಯಾಗಿದೆ. ಕಳೆದ ವರ್ಷ ಭೀಕರ ಬರಗಾಲ ಆವರಿಸಿ ತಾಲಕಿನ ಜನ, ಜಾನುವಾರು ಪರಿತಪಿಸುವಂತಾಗಿತ್ತು. ಈಗ ಪ್ರವಾಹ ಮತ್ತು ಬರ ಎರಡರಿಂದಲೂ ತಾಲೂಕಿನ ರೈತರು, ಜನ ಸಾಮಾನ್ಯರು ಹೈರಾಣಾಗುಂವತಾಗಿದೆ. ಸರ್ಕಾರ ತಾಲೂಕಿನ ಈ ಸಂದಿಗ್ಧ ಪರಿಸ್ಥಿತಿ ಅವಲೋಕಿಸಿ ನೆರೆ ಮತ್ತು ಬರ ಹಾವಳಿ ಪರಿಹಾರ ನೀಡಿ ರೈತರು, ಜನಸಾಮಾನ್ಯರಿಗೆ ಆಸರೆಯಾಬೇಕಾಗಿದೆ. ಇಲ್ಲವಾದರೆ ಮೊದಲೇ ಸಾಲದ ಶೂಲ ಹೊತ್ತುಕೊಂಡು ಬದುಕುತ್ತಿರುವ ರೈತರಿಗೆ ಯಾರೂ ದಿಕ್ಕಿಲ್ಲದಂತಾಗುತ್ತದೆ. ಹೀಗಾಗಿ ಸರ್ಕಾರ ನೆರೆ ನಿಂತ ಬಳಿಕ ಎಚ್ಚೆತ್ತುಕೊಂಡು ಸರಿಯಾಗಿ ಸರ್ವೇ ಮಾಡಿಸಿ ಸಂಕಷ್ಟ ಅನುಭವಿಸಿದವರಿಗೆಲ್ಲ ಪರಿಹಾರ ನೀಡಬೇಕು.