ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಭೀಮಾ ನದಿ ತುಂಬಿ ಹರಿಯುವುದರ ಜೊತೆಗೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದು, ಭೀಮಾ ನದಿಗೆ ಕಟ್ಟಿರುವ ಬ್ಯಾರೇಜ್‌ಗಳೀಗ ಅಪಾಯಕ್ಕೆ ಆಹ್ವಾನ ನೀಡುವಂತೆ ಭಾಸವಾಗುತ್ತಿವೆ.
ತಾಲೂಕಿನ ಸೊನ್ನ ಗ್ರಾಮದಲ್ಲಿರುವ ಬ್ಯಾರೇಜ್‌ನಲ್ಲಿ ನಾಲ್ಕು ದಿನ ಅಪಾಯ ಮಟ್ಟ ಮೀರಿ ನೀರು ಹರಿದಿದ್ದನ್ನು ವೀಕ್ಷಿಸಲು ನೂರಾರು ಜನರು ಆಗಮಿಸಿದ್ದರು. ಅದರಲ್ಲಿ ಯುವ ಜನಾಂಗದವರೇ ಹೆಚ್ಚಿದ್ದರು.
ಘತ್ತರಗಿ, ದೇವಲ ಗಾಣಗಾಪುರ, ಚಿನಮಳ್ಳಿಗಳಲ್ಲಿ ಇರುವ ಬ್ಯಾರೇಜ್‌ಗಳ ಮೇಲಿಂದ ಪ್ರವಾಹದ ನೀರು ಹರಿದುಹೋಗಿದ್ದರಿಂದ ಬ್ಯಾರೇಜ್ ಮೇಲಿರುವ ತಡೆಗೋಡೆಗಳು ಒಡೆದು ಅಪಾಯಕ್ಕೆ ಆಹ್ವಾನ ನಿಡುವಂತಾಗಿದೆ.
ಯುವ ಜನತೆ ಸೆಲ್ಫಿ ಗೀಳು: ಸೊನ್ನ ಏತ ನೀರಾವರಿ ಬ್ಯಾರೇಜ್‌ನಲ್ಲಿ ಸದ್ಯ ನೀರು ತುಂಬಿಕೊಂಡಿದ್ದನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಹೀಗೆ ಬರುವವರಲ್ಲಿ ಯುವ ಜನಾಂಗವೇ ಹೆಚ್ಚಾಗಿದ್ದು, ಬ್ಯಾರೇಜ್‌ನ ನಿಷೆಧೀತ ಪ್ರದೇಶಕ್ಕೆ ನುಗ್ಗಿ ನೀರನ್ನು ನೋಡುತ್ತಿದ್ದಾರೆ. ಹೈಡ್ರಾಲಿಕ್ ಗೇಟ್ ಎತ್ತುವ ಯಂತ್ರದ ಮೇಲೆ ಏರುವುದು, ನಿಷೆಧೀತ ಪ್ರದೇಶವಾದ ಗೇಟ್ ಒಳಗಿನ ಸ್ಥಳಕ್ಕೆ ಹೋಗುವುದನ್ನು ಮಾಡುತ್ತಿದ್ದಾರೆ. ಅಲ್ಲದೇ ನಿಷೆಧೀತ ಪ್ರದೇಶದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಈ ಗೀಳು ಜೀವಕ್ಕೆ ಕುತ್ತು ತರುವ ಆಪತ್ತೇ ಹೆಚ್ಚಾಗಿದೆ.
ಒಡೆದ ತಡೆಗೋಡೆ: ತಾಲೂಕಿನ ಘತ್ತರಗಿ ಹಾಗೂ ದೇವಲ ಗಾಣಗಾಪುರಗಳಲ್ಲಿ ಭೀಮಾ ನದಿಗೆ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಮೇಲಿಂದ ಪ್ರವಾಹದ ನೀರು ಹರಿದು ಹೋಗಿ ತಡೆ ಗೋಡೆಗಳು ಒಡೆದು ಹೋಗಿವೆ. ಹೀಗಾಗಿ ಬ್ಯಾರೇಜ್ ಮೇಲಿನ ರಸ್ತೆಗೆ ಈಗ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿಯೂ ಸಾಕಷ್ಟು ಜನರು ಆಗಮಿಸಿ ತಡೆಗೋಡೆ ಇರುವ ಪ್ರದೇಶ ದಾಟಿ ಪಿಲ್ಲರ್‌ಗಳ ಮೇಲೇರಿ ನದಿ ನೀರು ವೀಕ್ಷಿಸುತ್ತಿದ್ದಾರೆ. ಮಕ್ಕಳಿಂದ ವೃದ್ಧರ ವರೆಗೆ ಘತ್ತರಗಿ, ದೇವಲ ಗಾಣಗಾಪುರಗಳಲ್ಲಿ ನೀರು ನೋಡಲು ಆಗಮಿಸಿ, ಪಿಲ್ಲರ್‌ಗಳ ಮೇಲೆ ನಿಲ್ಲುತ್ತಿದ್ದಾರೆ. ಇಲ್ಲಿಯೂ ಸೆಲ್ಫಿ ಗೀಳು ಕಾಣುತ್ತಿದೆ.
ಅಪಾಯ ಕಟ್ಟಿಟ್ಟ ಬುತ್ತಿ: ಸೊನ್ನ, ಘತ್ತರಗಿ, ದೇವಲ ಗಾಣಗಾಪುರ ಸೇರಿದಂತೆ ನದಿ ಪಾತ್ರದಲ್ಲಿ ನೀರು ವೀಕ್ಷಣೆಗಾಗಿ ಯುವಕರು ಬಂದು ಅಪಾಯಕಾರಿ ಜಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ನೀರು ವೀಕ್ಷಿಸುವುದನ್ನು ತಪ್ಪಿಸದಿದ್ದರೆ, ಸಂಬಂಧ ಪಟ್ಟವರು ಜಾಗೃತವಾಗದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ಸಂಬಂಧ ಪಟ್ಟ ಕೆಎನ್‌ಎನ್‌ಎಲ್, ಪೊಲೀಸ್ ಇಲಾಖೆ ಜಾಗೃತವಾಗಿ ಬ್ಯಾರೇಜ್‌ಗಳಿರುವಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಿ, ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.