ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಕಳೆದ ವರ್ಷ ಮಳೆ ಬಾರದೆ ಬೆಳೆ ಫಸಲು ಬರಲಿಲ್ಲ. ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿತ್ತು. ಈ ವರ್ಷ ಮಳೆ ಸಮರ್ಪಕವಾಗಿ ಬಾರದೆ ರೈತರು ಕಂಗಾಲಾಗಿದ್ದಾರೆ. ನೆರೆ, ಬರದಿಂದ ಕಂಗೆಟ್ಟಿರುವ ತಾಲೂಕಿನ ರೈತರ ಗೋಳನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇಳುವರೆ ಎಂಬ ಪ್ರಶ್ನೆ ಮೂಡಿದೆ.
ತಾಲೂಕಿನಲ್ಲಿ ಭೀಮಾ ನದಿ ಹರಿಯುತ್ತಿದ್ದರೂ ನೀರಿನ ಭವಣೆ ತಪ್ಪಿಲ್ಲ. ಕೆರೆ ಕುಂಟೆಗಳು ಖಾಲಿಯಾಗಿ ಕುಡಿಯುವ ನೀರು ಇಲ್ಲದಂತಾಗಿದೆ. ಮುಖ್ಯಮಂತ್ರಿಗಳಾದ ಬಳಿಕ ಮೊದಲ ಬಾರಿಗೆ ತಾಲೂಕಿನ ದೇವಲ ಗಾಣಗಾಪುರಕ್ಕೆ ಆಗಮಿಸುತ್ತಿರುವ ಬಿ.ಎಸ್ ಯಡಿಯೂರಪ್ಪ ರೈತರ ಸಮಸ್ಯೆ ಆಲಿಸಿ ಪರಿಹಾರ ನೀಡುವರೆ ಎಂಬ ಪ್ರಶ್ನೆ ಕಾಡುತ್ತಿದೆ.
ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಬಾರದಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಬಂದು ಭೀಮಾ ನದಿ ದಡದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗಿದೆ. ಇನ್ನೇನು ಫಸಲು ಕೈಗೆ ಬಂದು ಮಾಡಿದ ಸಾಲ ತೀರಿಸಿಕೊಳ್ಳಬಹುದು ಎಂದು ಖುಷಿಯಲ್ಲಿದ್ದ ರೈತರು ಮತ್ತೆ ಮರಗುವಂತಾಗಿದೆ. ಇನ್ನೂ ನದಿ ಇಲ್ಲದ ಪ್ರದೇಶದಲ್ಲಿ ರೈತರಿಗೆ ಬೇಕಾದಾಗ ಮಳೆ ಬರಲಿಲ್ಲ. ಬೇಡವಾದಾಗ ಮಳೆ ಬಂದು ಉತ್ತಮವಾಗಿ ಬೆಳೆದಿದ್ದ ತೊಗರಿ, ಸೂರ್ಯಕಾಂತಿ, ಹತ್ತಿ ಬೆಳೆಗಳು ಹಾಳಾಗಿವೆ. ಇದರಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಾಲೂಕಿನ ರೈತರಿಗೆಲ್ಲ ಬರ ಪರಿಹಾರದ ಹಣ ಬಂದಿಲ್ಲ. ನೆರೆ ಬಂದ ಬಳಿಕ ಪರಿಹಾರಕ್ಕಾಗಿ ಕೇಂದ್ರ, ರಾಜ್ಯದಿಂದ ಬಿಡುಗಡೆಯಾದ ಹಣ ಕೈ ಸೇರಿಲ್ಲ. ಹೀಗಾಗಿ ನೆರೆ, ಬರದ ಪರಿಹಾರ ಸಿಗದೆ ರೈತರು ಪರದಾಡುವಂತಾಗಿದೆ. ಇನ್ನೂ ತಾಲೂಕಿನ ಭೀಮಾ ನದಿಯೇ ನೀರಾವರಿ ಮೂಲವಾಗಿದೆ. ತಾಲೂಕಿನ ಸೊನ್ನದಲ್ಲಿ ದೊಡ್ಡ ಮಟ್ಟದ ಬ್ಯಾರೇಜ್ ನಿರ್ಮಾಣವಾಗಿದೆ. ಆದರೆ ಅದರ ನೀರು ತಾಲೂಕಿನ ರೈತರಿಗೆ ಸರಿಯಾಗಿ ಬಳಕೆಗೆ ಸಿಗುತ್ತಿಲ್ಲ. ಹೀಗಾಗಿ ಘತ್ತರಗಿ, ದೇವಲ ಗಾಣಗಾಪುರ ಹಾಗೂ ಚಿನಮಳ್ಳಿಯಲ್ಲಿ ಸಣ್ಣ ಬ್ರೀಜ್ ಕಂ ಬ್ಯಾರೆಜ್ ನಿರ್ಮಿಸಲಾಗಿದೆ. ಆದರೆ ಚಿನಮಳ್ಳಿ ಬ್ಯಾರೇಜ್ ಪ್ರವಾಹದ ನೀರಿನಿಂದ ಒಡೆದು 3 ವರ್ಷ ಗತಿಸಿದರೂ ಅದನ್ನು ರಿಪೇರಿ ಮಾಡುತ್ತಿಲ್ಲ. ಚಿನಮಳ್ಳಿಯಲ್ಲಿ ನೀರು ಹಿಡಿದಿಡಲು ಸಾಧ್ಯವಾಗದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.