Advertisement

ಭೀಮಾನದಿಯಲ್ಲಿ ಮತ್ತೆ ಟಿಪ್ಪರ್‌-ಹಿಟಾಚಿ ಸದ್ದು !

11:51 AM Jan 05, 2020 | |

ಅಫಜಲಪುರ: ತಾಲೂಕಿನ ಜೀವನದಿಯಾಗಿರುವ ಭೀಮಾ ನದಿಯಲ್ಲಿ ಮತ್ತೆ ಅಕ್ರಮ ಮರಳು ದಂಧೆ ಶುರುವಾಗಿದೆ.

Advertisement

ಟಿಪ್ಪರ್‌-ಹಿಟಾಚಿ ಸದ್ದು: ತಾಲೂಕಿನಲ್ಲಿ ಹರಿಯುವ ಭೀಮಾ ನದಿಯಲ್ಲಿ ಅಕ್ರಮ ಮರಳು ದಂಧೆ ಆರಂಭವಾಗುತ್ತಲೇ, ನದಿಗೆ ಹಿಟಾಚಿ, ಟಿಪ್ಪರ್‌ ವಾಹನಗಳು ಲಗ್ಗೆ ಇಟ್ಟಿದ್ದು, ಹಗಲು-ರಾತ್ರಿ ಎನ್ನದೆ ಮರಳು ಧಂದೆ ನಡೆಯುತ್ತಿದೆ. ಇದರಿಂದ ಭೀಮಾ ನದಿ ಒಡಲು ಖಾಲಿಯಾಗುವ ಹಂತಕ್ಕೆ ತಲುಪಿದೆ.

ಸರ್ಕಾರಿ ಕಚೇರಿಗಳು ಸಾಲುತ್ತಿಲ್ಲ: ಭೀಮಾ ನದಿಯಿಂದ ಹೊರ ತೆಗೆದ ಅಕ್ರಮ ಮರಳನ್ನು ಮನಸೋ ಇಚ್ಚೆ ಸಾಗಿಸುವುದಲ್ಲದೇ, ಸರ್ಕಾರಿ ಕಚೇರಿಗಳ ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕಚೇರಿಗಳ ಮೈದಾನಗಳು ಸಂಗ್ರಹಕ್ಕೆ ಸಾಲುತ್ತಿಲ್ಲ ಎಂದರೆ ಅಕ್ರಮ ಮರಳು ದಂಧೆ ಎಷ್ಟು ದೊಡ್ಡ ಮಟ್ಟದಲ್ಲಿ ಇರುಬಹುದು ಎನ್ನುವುದನ್ನು ಅಂದಾಜಿಸಬಹುದು.

ನಿತ್ಯ ಟಿಪ್ಪರ್‌, ಟ್ರ್ಯಾಕ್ಟರ್‌ಗಳ ಮೂಲಕ ಎಡೆಬಿಡದೆ ಮರಳು ಸಾಗಾಟ ನಡೆದಿದೆ. ಅದರಲ್ಲೂ ತಾಲೂಕಿನಿಂದ ಹೊರರಾಜ್ಯಗಳಿಗೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ.

ನಾಮಕೇವಾಸ್ತೆ ಪರೀಕ್ಷಾ ಕೇಂದ್ರ: ಅಕ್ರಮ ಮರಳು ಸಾಗಾಟ ನಿಯಂತ್ರಿಸುವ ಸಲುವಾಗಿ ತಾಲೂಕಿನ ಮಲ್ಲಾಬಾದ, ಚವಡಾಪುರ ಬಳಿ ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಂದಿಕೊಂಡು ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಅವು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬಾಗಿಲು ಮುಚ್ಚಿರುವ ತಪಾಸಣೆ ಕೇಂದ್ರಗಳ ಸುತ್ತ ಜಾಲಿ ಕಂಟಿ ಬೆಳೆದಿದೆ. ಅದರ ಸುತ್ತ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಲ್ಲಾಬಾದ ಬಳಿ ಇರುವ ತಪಾಸಣೆ ಕೇಂದ್ರದ ಮೇಲ್ಛಾವಣಿ ಕುಸಿದಿದೆ. ಇದನ್ನು ಯಾರೂ ಗಮನಿಸುತ್ತಿಲ್ಲ. ಎರಡು ಕೇಂದ್ರಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇವು ನಾಮಕೇವಾಸ್ತೆ ಎನ್ನುವಂತಾಗಿದೆ. ಯಾವ ವಾಹನಗಳನ್ನು ಈ ಕೇಂದ್ರಗಳಲ್ಲಿ ಜಪ್ತಿ ಮಾಡುತ್ತಿಲ್ಲ.

Advertisement

ಮರಳು ದಂಧೆಗೆ ಕಡಿವಾಣ ಹಾಕಲು ಇಲಾಖೆಗಳು ವಿಫಲ: ಅಕ್ರಮ ಮರಳು ದಂಧೆಗೆ ಒಂದರ್ಥದಲ್ಲಿ ಇಲಾಖೆಗಳು ಸಹಕಾರ ನೀಡಿದಂತೆ ಕಾಣುತ್ತಿದೆ. ಮರಳು ಸಾಗಾಟ ಮಾಡಲು ರಾಯಲ್ಟಿ ನೀಡಲಾಗುತ್ತದೆ. ಆದರೆ ಯಾವ ಪಾಯಿಂಟ್‌ನಿಂದ ಮರಳು ಸಾಗಿಸಬೇಕೆಂದು ತೋರಿಸುವುದಿಲ್ಲ. ಹೀಗಾಗಿ ದಂಧೆಕೋರರು ಮನಸೋ ಇಚ್ಚೆ ಮರಳು ಸಾಗಾಟ ಮಾಡುತ್ತಿದ್ದಾರೆ.

ಅಕ್ರಮ ಮರಳು ಸಾಗಾಟ ಗಮನಕ್ಕೆ ಬಂದರೆ, ಕೂಡಲೇ ದಾಳಿ ನಡೆಸಿ ಅಕ್ರಮ ಮರಳು ವಶಕ್ಕೆ ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಯಲ್ಲಪ್ಪ ಸುಬೇದಾರ,
ತಹಶೀಲ್ದಾರ್‌

ಡಿ.27ರಂದು ರಾತ್ರಿ ರೇವೂರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದೇವೆ. ಅಕ್ರಮ ತಡೆಗಟ್ಟಲು ಸತತ ಶ್ರಮ ವಹಿಸುತ್ತಿದ್ದೇವೆ. ಮರಳು ತಪಾಸಣಾ ಕೇಂದ್ರಗಳು ಹಾಳಾಗಿದ್ದರ ಬಗ್ಗೆ ಕೂಡಲೇ ಸಭೆ ಕರೆದು ಸರಿಪಡಿಸಲಾಗುತ್ತದೆ. ಮರಳು ಸಾಗಾಟಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಖಡಕ್‌ ಸೂಚನೆ ನೀಡಲಾಗಿದೆ.
ರಾಮಚಂದ್ರ ಗಡದೆ,
ಸಹಾಯಕ ಆಯುಕ್ತರು, ಕಲಬುರಗಿ

ಅಕ್ರಮ ಮರಳು ಸಾಗಾಟ ತಡೆಗಟ್ಟುವ ಕೆಲಸ ಮಾಡುತ್ತಿದ್ದೇವೆ. ಅಕ್ರಮ ಕಂಡು ಬಂದರೆ ಚಾಲಕ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.
ಮಹಾದೇವ ಪಂಚಮುಖೀ, ಸಿಪಿಐ

ಮಲ್ಲಿಕಾರ್ಜುನ ಹೀರೆಮಠ

Advertisement

Udayavani is now on Telegram. Click here to join our channel and stay updated with the latest news.

Next