Advertisement

ಮೊಬೈಲ್‌ ಬೆಳಕಲ್ಲಿ ಪೇಪರ್‌ ಓದೋ ದುಸ್ಥಿತಿ!

04:50 PM Nov 16, 2019 | Naveen |

ಅಫಜಲಪುರ: ಸರ್ಕಾರ ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಿಗಾಗಿ ಪ್ರತಿ ನಗರ, ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಕಟ್ಟಿಸುತ್ತಿದೆ. ಆದರೆ ಕೆಲವು ಕಡೆ ಸ್ವಂತ ಕಟ್ಟಡವಿಲ್ಲದೇ ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಂಥಾಲಯಗಳು ಸೊರಗುವಂತಾಗಿವೆ.

Advertisement

ಅಫಜಲಪುರ ಪಟ್ಟಣದಲ್ಲಿರುವ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಹೀಗಾಗಿ ಇಲ್ಲಿಗೆ ಓದಲು ಬರುವವರು ಮೊಬೈಲ್‌ ಬೆಳಕಲ್ಲಿ ಪತ್ರಿಕೆ, ಪುಸ್ತಕಗಳನ್ನು ಓದುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಸ್ವಂತ ಕಟ್ಟಡವಿಲ್ಲ: ಪಟ್ಟಣದಲ್ಲಿರುವ ತಾಲೂಕು ಗ್ರಂಥಾಲಯ 1989ರಲ್ಲಿ ಸ್ಥಾಪನೆಯಾಗಿದೆ. ಆದರೆ ಸ್ವಂತ ಕಟ್ಟಡವಿಲ್ಲ. ಮೊದಲಿಗೆ ಪಟ್ಟಣದ ನಿಚೇಗಲ್ಲಿಯ ಬಾಡಿಗೆ ಮನೆಯೊಂದರಲ್ಲಿ ಗ್ರಂಥಾಲಯ ಆರಂಭಿಸಲಾಗಿತ್ತು. ಮಳೆಗಾಲದಲ್ಲಿ ಆ ಮನೆ ಸೋರುತ್ತಿದ್ದ ಕಾರಣದಿಂದ ಗ್ರಂಥಾಲಯವನ್ನು ತಹಶೀಲ್ದಾರ್‌ ಕಚೇರಿ ಮುಂದಿರುವ ಸರ್ಕಾರಿ ಪ್ರೌಢ ಶಾಲೆಯ ಒಂದು ಕೋಣೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿಯೂ ಸಮಸ್ಯೆಗಳು ಕಾಡುತ್ತಿವೆ. ಒಂದೇ ಕೋಣೆ ಇರುವುದರಿಂದ ಪುಸ್ತಕಗಳನ್ನು ಸರಿಯಾಗಿ ಜೋಡಿಸಿಡಲು ಆಗುತ್ತಿಲ್ಲ. ಓದುಗರಿಗೆ ಸರಿಯಾಗಿ ಆಸನಗಳ ವ್ಯವಸ್ಥೆ ಮಾಡಿಸಿ, ಅನುಕೂಲ ಮಾಡಿಕೊಡಲು ಆಗುತ್ತಿಲ್ಲ. ಸ್ವಂತ ಕಟ್ಟಡ ಇಲ್ಲದ್ದರಿಂದ ಮತ್ತು ಸೌಲಭ್ಯಗಳ ಕೊರತೆ ಇಲ್ಲದ್ದರಿಂದ ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಡಿ. ಗ್ರೂಪ್‌ ನೌಕರರೇ ಗ್ರಂಥಪಾಲಕರು: ಗ್ರಂಥಾಲಯ ಆರಂಭವಾದಾಗಿನಿಂದ ಇಲ್ಲಿಯವರೆಗೆ ಗ್ರಂಥಪಾಲಕ ಹುದ್ದೆ ಭರ್ತಿಯಾಗಿಲ್ಲ. ಇಲ್ಲಿನ ಡಿ. ಗ್ರೂಪ್‌ ನೌಕರರೇ ಗ್ರಂಥಪಾಲಕ ಹುದ್ದೆ ನಿಭಾಯಿಸುತ್ತಿದ್ದಾರೆ. ಮಹಿಳಾ ಓದುಗರು ಬರೋದಿಲ್ಲ: ಪಟ್ಟಣದ ಗ್ರಂಥಾಲಯದಲ್ಲಿ 7856 ಪುಸ್ತಕಗಳಿಗೆ. ಈ ಪೈಕಿ ಹಳೆಯ 6048 ಪುಸ್ತಕಗಳಿವೆ, 2015 ಅಕ್ಟೋಬರ್‌ 9ರಿಂದ ಇಲ್ಲಿಯವರೆಗೆ 1808 ಪುಸ್ತಕಗಳು ಬಂದಿವೆ. ಗ್ರಂಥಾಲದಯಲ್ಲಿ ಒಟ್ಟು 398 ಸದಸ್ಯರು ಇದ್ದಾರೆ. ಒಟ್ಟು 11 ದಿನಪತ್ರಿಕೆ ಬರುತ್ತವೆ. ಈ ಪೈಕಿ ಏಳು ಕನ್ನಡ, ಒಂದು ಇಂಗ್ಲಿಷ್‌, ಎರಡು ಉರ್ದು, ಒಂದು ಮರಾಠಿ ಪತ್ರಿಕೆ ಬರುತ್ತವೆ. ವಾರ, ಮಾಸ, ಪಾಕ್ಷಿಕ, ವಾರ್ಷಿಕ ಪತ್ರಿಗಳು ಬರುವುದಿಲ್ಲ. ನಿತ್ಯ 15ರಿಂದ 20 ಜನ ಮಾತ್ರ ಓದುಗರು ಬರುತ್ತಿದ್ದಾರೆ.

ಓದುಗರ ಸಂಖ್ಯೆ ಕಡಿಮೆಯಾಗಲು ಸೌಲಭ್ಯಗಳ ಕೊರತೆ ಕಾರಣವಾಗಿದೆ. ಗ್ರಂಥಾಲಯಕ್ಕೆ ಒಬ್ಬರೂ ಮಹಿಳಾ ಓದುಗರು ಬಂದು ಪುಸ್ತಕ, ಪತ್ರಿಕೆ ಓದಿದ ಇತಿಹಾಸವೇ ಇಲ್ಲ. ಹಾಳು ಬಿದ್ದಿರುವ ಪುಸ್ತಕಗಳು: ಪಟ್ಟಣದ ಗ್ರಂಥಾಲಯವನ್ನು ಸರ್ಕಾರಿ ಪ್ರೌಢ ಶಾಲೆಯ ಒಂದು ಕೋಣೆಗೆ ಸ್ಥಳಾಂತರ ಮಾಡಿದ್ದರಿಂದ ಸಣ್ಣದಾಗಿರುವ ಕೋಣೆಯಲ್ಲಿ ಪುಸ್ತಕಗಳನ್ನು ಸರಿಯಾಗಿ ಜೋಡಿಸಿಡಲು ಆಗುತ್ತಿಲ್ಲ. ಹೊಸ ಪುಸ್ತಕಗಳನ್ನು ಓದುಗರಿಗೆ ನೀಡಲಾಗುತ್ತಿಲ್ಲ. ಗ್ರಂಥಾಲಯಗಳಿಗೆ ಬಂದಿರುವ ಪುಸ್ತಕಗಳನ್ನು ಗಂಟು ಕಟ್ಟಿ ಇಡಲಾಗಿದೆ. ಹೀಗಾಗಿ ಮಳೆ ನೀರಿಗೆ ಪುಸ್ತಕಗಳು ನೆನೆದು ವಾಸನೆ ಬೀರುತ್ತಿವೆ. ಈ ವಾಸನೆಯಿಂದ ಓದುಗರಿಗೆ ಕಿರಿಕಿರಿ ಆಗುತ್ತಿದೆ. ಅಲ್ಲದೇ ಧೂಳಿನ ಸಮಸ್ಯೆಯೂ ವಿಪರೀತವಾಗಿದೆ.

Advertisement

ವಾರ್ಡ್‌ ನಂ. 20ರಲ್ಲಿ ಗ್ರಂಥಾಲಯವಿದ್ದರೂ ಉಪಯೋಗಕ್ಕಿಲ್ಲ: ಪಟ್ಟಣದ ವಾರ್ಡ್‌ ನಂ 20ರಲ್ಲಿ 2011-12ನೇ ಸಾಲಿನಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಪಿಆರ್‌ಇ ಇಲಾಖೆ ವತಿಯಿಂದ ಗ್ರಂಥಾಲಯ ಕಟ್ಟಡ ಕಟ್ಟಿಸಲಾಗಿದೆ. ಆದರೆ ಅದು ಉಪಯೋಗಕ್ಕೆ ಬಾರದಂತಾಗಿದೆ. ಗ್ರಂಥಾಲಯ ಸುತ್ತ ಸಾರ್ವಜನಿಕ ಶೌಚಾಲಯ, ಗಿಡಗಂಟಿ ಬೆಳದಿದ್ದು, ಗ್ರಂಥಾಲಯವೇ ಕಾಣದಂತಾಗಿದೆ. ಸದ್ಯ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡ ಕಟ್ಟಿದ ಬಳಿಕ ಇದುವರೆಗೂ ಯಾರ ಸುಪರ್ದಿಗೂ ಹೋಗದ ಕಾರಣ ಸದ್ಯ ಖಾಲಿ ಉಳಿದುಕೊಂಡಿದೆ.

ಗ್ರಂಥಾಲಯ ಸುತ್ತ ಅನೈತಿಕ ಚಟುವಟಿಕೆ: ಸರ್ಕಾರಿ ಪ್ರೌಢ ಶಾಲೆ ಪಕ್ಕದಲ್ಲಿ ಸರ್ಕಾರಿ ಅತಿಥಿಗೃಹವಿದೆ. ಇನ್ನೊಂದು ಬದಿಯಲ್ಲಿ ಬಸ್‌ ನಿಲ್ದಾಣವಿದೆ. ಶಾಲೆ ಹಿಂಬದಿ ಖಾಲಿಜಾಗದಲ್ಲಿ ಪಟ್ಟಣದ ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಎದುರುಗಡೆ ಮುಖ್ಯ ಹೆದ್ದಾರಿ ಇರುವುದರಿಂದ ಸದಾ ಜನಜಂಗುಳಿ, ವಾಹನಗಳ ಓಡಾಟವಿರುತ್ತದೆ. ಹಗಲೊತ್ತಿನಲ್ಲಿ ಒಂದು ಸಮಸ್ಯೆಯಾದರೆ, ರಾತ್ರಿಯಾಗುತ್ತಿದ್ದಂತೆ ಇಲ್ಲಿ ಅನೈತಿಕ ಚಟುವಟಿಕೆಗಳು ಶುರುವಾಗುತ್ತವೆ. ರಾತ್ರಿ ವೇಳೆಯಲ್ಲಿ ಗ್ರಂಥಾಲಯದಲ್ಲಿ ವಿದ್ಯುತ್‌ ಸಂಪರ್ಕವೂ ಇರುವುದಿಲ್ಲ. ಹೀಗಾಗಿ ಕುಡುಕರ, ಪುಂಡರ ಹಾವಳಿ ಹೆಚ್ಚಾಗಿರುತ್ತದೆ. ಹೀಗಾಗಿ ಪಟ್ಟಣದ ಐತಿಹಾಸಿಕ ಗ್ರಂಥಾಲಯಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next