ಏರೋಸ್ಪೇಸ್ ಎಂಜಿನಿಯರಿಂಗ್‌ನ ಕೋರ್ಸ್‌ಗಳಲ್ಲಿ ಒಂದಾದ ಏರೋನಾಟಿಕ್ ಎಂಜಿನಿಯರ್ ಕ್ಷೇತ್ರಕ್ಕೆ ಅವಕಾಶಗಳು ಬಹಳಷ್ಟಿವೆ. ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ವಿಮಾನ, ಕ್ಷಿಪಣಿ, ಹೆಲಿಕಾಪ್ಟರ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಅನೇಕ ವಿದ್ಯಾರ್ಥಿಗಳಲ್ಲಿ ಬರುತ್ತಿದ್ದು, ಇದು ಹೆಚ್ಚಿನ ಮಂದಿಯ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದಾಗುತ್ತಿದೆ. ಮಂಗಳೂರು ಸುತ್ತಮುತ್ತಲೂ ಕೂಡ ಕೆಲವೊಂದು ಕಾಲೇಜುಗಳಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಕೋರ್ಸ್ ಇದ್ದು, ಹೆಚ್ಚಿನ ಮಂದಿ ಕಲಿಕೆಗೆ ಒಲವು ತೋರುತ್ತಿದ್ದಾರೆ.
ಏರೋನಾಟಿಕ್ ಎಂಜಿನಿಯರ್ ಕಲಿಯುವ ವಿದ್ಯಾರ್ಥಿಗಳು ಅದಕ್ಕೆ ಸಂಬಂಧಪಟ್ಟಂತಹ ವಿಮಾನ ರಚನೆ, ವಿಮಾನ ಕಾರ್ಯವಿಧಾನ, ಮೆಟೀರಿಯಲ್ ಸೈನ್ಸ್, ಪ್ರೊಪ್ಯುಲ್ಸಸ್, ಸ್ವಯಂಚಾಲಿತ ನಿಯಂತ್ರಣ ಮತ್ತು ಮಾರ್ಗದರ್ಶನ, ರಚನಾತ್ಮಕ ವಿಶ್ಲೇಷಣೆ ಮುಂತಾದ ವಿಚಾರಗಳ ಬಗ್ಗೆಯೂ ಕಲಿಯುವಂತಹ ಅವಕಾಶವಿದೆ. ಇದೇ ಕಾರಣಕ್ಕೆ ಈ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಆಕರ್ಷಣೀಯ ವಿಷಯಗಳಲ್ಲಿ ಒಂದಾಗಿದೆ.
ಏರೋನಾಟಿಕ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಬಿ ಟೆಕ್ ಏರೋನಾಟಿಕ್ ಎಂಜಿನಿಯರಿಂಗ್ ಕಲಿಯಲು ಗಣಿತ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯವನ್ನು ಪಿಯುಸಿಯಲ್ಲಿ ಕಲಿತಿರಬೇಕು. ಜತೆಗೆ ಜೆಇಇ ಮೈನ್ ಪರೀಕ್ಷೆಯನ್ನು ಉತ್ತಮ ಅಂಕದಲ್ಲಿ ಉತ್ತೀರ್ಣರಾಗಿರಬೇಕು. ಅನಂತರ ಕೌನ್ಸಲಿಂಗ್ ಮುಖೇನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಬಿ.ಟೆಕ್. ಅಥವಾ ಬಿಇ ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಮತ್ತಷ್ಟು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎನ್ನುವ ವಿದ್ಯಾರ್ಥಿಗಳಿಗೂ ಅವಕಾಶವಿದ್ದು, ಎಂಟೆಕ್ ಅಥವಾ ಎಂಎಸ್ ಕಲಿಯಬಹುದಾಗಿದೆ.
ಈ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಏರೋನಾಟಿಕಲ್ ಎಂಜಿನಿಯರಿಂಗ್ ಕಲಿಕೆ ಅಂದರೆ ಕೇವಲ ವಾಯುಯಾನ ಕ್ಷೇತ್ರಕ್ಕೆ ಸಂಬಂಧಪಟ್ಟದ್ದಲ್ಲ. ರಕ್ಷಣಾ ವಲಯದ ವಾಯುಪಡೆಗೂ ಸಂಬಂಧಿಸಿದ್ದಾಗಿದೆ. ಇಲ್ಲಿ ವೈಜ್ಞಾನಿಕ, ತಾಂತ್ರಿಕ ವಿಷಯಗಳಿಗೆ ಮಹತ್ವ ನೀಡಲಾಗುತ್ತದೆ. ನಾಗರಿಕ ಮತ್ತು ಮಿಲಿಟರಿ ಶಸ್ತ್ರಾಸ್ತ್ರಗಳು, ವಿಮಾನ ಮತ್ತು ಕ್ಷಿಪಣಿಗಳ ಕಾರ್ಯಕ್ಷಮತೆ ಪರಿಶೀಲನೆ, ವಿನ್ಯಾಸಗೊಳಿಸುವಿಕೆ, ನಿರ್ವಹಣೆಯೂ ಸೇರಿವೆ.
ಕೋರ್ಸ್ ಕಲಿಕೆಗೆ ಟಾಪ್ ಕಾಲೇಜುಗಳು
ಏರೋನಾಟಿಕ್ ಎಂಜಿನಿಯರಿಂಗ್ ಕ್ಷೇತ್ರ ಆರಿಸುವ ವಿದ್ಯಾರ್ಥಿಗಳು ದೇಶದ ಟಾಪ್ ಕಾಲೇಜುಗಳನ್ನು ಆಯ್ಕೆ ಮಾಡುತ್ತಾರೆ. ಅದರಲ್ಲಿ ಮುಖ್ಯವಾದದ್ದು ಐಐಟಿ ಬಾಂಬೆ, ಐಐಟಿ ಕಾನ್ಪುರ, ಐಐಟಿ ಕರಂಗ್ಪುರ, ಐಐಟಿ ಮದ್ರಾಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನೋಲಜಿ, ಪಿಯಿಸಿ ಯುನಿವರ್ಸಿಟಿ ಆಫ್ ಟೆಕ್ನೋಲಜಿ, ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಯುನಿವರ್ಸಿಟಿ ಆಫ್ ಪೆಟ್ರೋಲಿಯಂ ಆ್ಯಂಡ್ ಎಜರ್ನಿ ಸ್ಟಡೀಸ್, ಹಿಂದುಸ್ಥಾನ್ ಯುನಿವರ್ಸಿಟಿ, ಗೀತಂ ಯುನಿವರ್ಸಿಟಿ ಹೈದರಾಬಾದ್ ಸೇರಿವೆ.
•ನವೀನ್ ಭಟ್ ಇಳಂತಿಲ