Advertisement

ಲೋಕಾ ಚುನಾವಣೆಗೆ ಏರ್‌ ಶೋ ಸ್ಥಳಾಂತರ

06:25 AM Aug 13, 2018 | Team Udayavani |

ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ’ ಪ್ರಸಕ್ತ ವರ್ಷ ಲಕ್ನೋಗೆ ಸ್ಥಳಾಂತರಗೊಂಡಿದೆ ಎಂಬ ಸುದ್ದಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ, ಲಕ್ನೋಗೆ ಸ್ಥಳಾಂತರಗೊಳಿಸಿದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಆರೋಪಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿ ಈ ಬಾರಿ ಲಖನೌಗೆ ಸ್ಥಳಾಂತರ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದಿದ್ದಾರೆ. ಡಿಸಿಎಂ ಪರಮೇಶ್ವರ್‌, ಒಂದೊಮ್ಮೆ ಲಕ್ನೋಗೆ ಸ್ಥಳಾಂತರಗೊಂಡಿರುವುದು ನಿಜವಾಗಿದ್ದರೆ,ಕರ್ನಾಟಕದಿಂದಲೇ ರಾಜ್ಯಸಭೆಗೆ ನೇಮಕಗೊಂಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕನ್ನಡಿಗರಿಗೆ ಮಾಡಿದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.

Advertisement

ಹುಬ್ಬಳ್ಳಿ: ಬೆಂಗಳೂರಿನಲ್ಲಿ 1996ರಿಂದ ಏರ್‌ಶೋ ಪ್ರದರ್ಶನ ಆಯೋಜಿಸಲಾಗುತ್ತಿದೆ. ಆದರೆ, ಈ ಬಾರಿ ಲಕ್ನೋಗೆ ಸ್ಥಳಾಂತರ ಮಾಡುತ್ತಿರುವ ಕ್ರಮ ಸರಿಯಲ್ಲ. ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏರ್‌ ಶೋವನ್ನು ಲಕ್ನೋಗೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆಸುತ್ತಿದೆ. ಆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಲು ಹೊರಟಿದೆ. ಇದು ಸರಿಯಲ್ಲ. ಬೆಂಗಳೂರಿನಲ್ಲಿ ಏರ್‌ ಶೋಕ್ಕೆ ಎಲ್ಲ ರೀತಿಯ ಮೂಲ ಸೌಕರ್ಯಗಳಿವೆ. ಆದರೆ, ಏರ್‌ ಶೋ ಸ್ಥಳಾಂತರ ಬಗ್ಗೆ ಕೇಂದ್ರದಿಂದ ಇದುವರೆಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದರು.

ಸಿದ್ದರಾಮಯ್ಯ ಬೇಸರ
ಬೆಂಗಳೂರು:
ಏರೋ ಇಂಡಿಯಾ ಶೋ ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರ ಗೊಳ್ಳುತ್ತಿರುವ ಬಗ್ಗೆ ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಿಲುವಿನಿಂದಾಗಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಒಂದೊಂದಾಗಿ ರಾಜ್ಯದಿಂದ ಕೈತಪ್ಪಿ ಹೋಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದರೂ ವೈಮಾನಿಕ ಪ್ರದರ್ಶನವನ್ನು ಲಖನೌಗೆ ಸ್ಥಳಾಂತರಿಸುವುದು ಬೇಸರ ತಂದಿದೆ. ಎಚ್‌ಎಎಲ್‌ನಿಂದ ರಫೇಲ್‌ ಯೋಜನೆ ಕೈತಪ್ಪಿರುವುದು ಇನ್ನೂ ಹಸಿರಾಗಿರುವಾಗಲೇ ವೈಮಾನಿಕ ಪ್ರದರ್ಶನ ಸ್ಥಳಾಂತರದ ಕಹಿ ಸುದ್ದಿ ಕೇಳಿ ಬರುತ್ತಿದೆ ಎಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೇಲೆ ಬಿಜೆಪಿ ಒತ್ತಡ ಹಾಕಲಿ
ಹುಬ್ಬಳ್ಳಿ
: ಬಿಜೆಪಿ ಮುಖಂಡರು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ಬೆಂಗಳೂರಿನಲ್ಲೇ ಏರ್‌ ಶೋ ನಡೆಸುವಂತೆ ಪ್ರಧಾನಿ ಮೇಲೆ ಒತ್ತಡ ಹೇರಬೇಕೆಂದು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರವು ಏರ್‌ ಶೋವನ್ನು ಬೆಂಗಳೂರಿನಿಂದ ಲಕ್ನೋಗೆ
ಸ್ಥಳಾಂತರಿಸುತ್ತಿರುವ ನಿರ್ಧಾರ ಸರಿಯಲ್ಲ. ಬೆಂಗಳೂರಿನಲ್ಲಿನ ಏರ್‌ ಶೋವನ್ನು ಸ್ಥಳಾಂತರ ಮಾಡದಂತೆ ಸಿಎಂ ಕುಮಾರಸ್ವಾಮಿ ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೇಂದ್ರವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ರಾಜ್ಯದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ, ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವರು ಪ್ರಶ್ನಿಸಲಿ. ಅವರು ನಿಯೋಗ ಕೊಂಡೊಯ್ದು ಏರ್‌ ಶೋವನ್ನು ಬೆಂಗಳೂರಿನಲ್ಲೇ ನಡೆಸುವಂತೆ ಒತ್ತಾಯಿಸಬೇಕು. ರಾಜ್ಯ ಸರ್ಕಾರ ಮತ್ತೂಮ್ಮೆ ಈ ಕುರಿತು ಒತ್ತಾಯ ಮಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next