Advertisement
ಭವಿಷ್ಯದ ಭಾರತೀಯ ವೈಮಾನಿಕ ಕ್ಷೇತ್ರದ ಬೆಳವಣಿಗೆಯ ಮುನ್ಸೂಚನೆಗಳೊಂದಿಗೆ ಯಲಹಂಕದ ವಾಯುನೆಲೆಯಲ್ಲಿ ನಡೆದ ಈ ಬಾರಿಯ ಐದು ದಿನಗಳ ವೈಮಾನಿಕ ಪ್ರದರ್ಶನ ಒಂದೂವರೆ ಲಕ್ಷ ಉದ್ದಿಮೆದಾರರು ಸೇರಿ ಐದು ಲಕ್ಷಕ್ಕೂ ಹೆಚ್ಚು ಜನರ ವೀಕ್ಷಣೆಗೆ ಸಾಕ್ಷಿಯಾಯಿತು.
ವೈಮಾನಿಕ ಪ್ರದರ್ಶನದಲ್ಲಿ ಇಂಗ್ಲೆಂಡ್ ಮೂಲದ ವಿಮಾನಗಳು ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸಿ ಗಮನಸೆಳೆದವು.
Related Articles
Advertisement
ಇನ್ನು ದೇಶದ ಸೂರ್ಯಕಿರಣ್, ಸಾರಂಗ್, ತೇಜಸ್ ತಂಡಗಳು ಭಾರತದ ರಕ್ಷಣಾ ಸಾಮರ್ಥಯ ಸಾಬೀತುಪಡಿಸುವುದರ ಜತೆಗೆ ದೇಶಾಭಿಮಾನ ಮೂಡಿಸುವಂತಹ ಚಿತ್ತಾಕರ್ಷಕ ಸಾಹಸ ಪ್ರದರ್ಶನ ನಡೆಸಿಕೊಟ್ಟು ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡರೆ, ಅಮೇರಿಕಾದ ಎಫ್-16, ಇಂಗ್ಲೆಂಡಿನ ಯಾಕೊವ್‌ಲೇವ್ಸ್, ಸ್ವಿಡನ್‌ನ ಸ್ಕ್ಯಾಂಡಿನೇವಿಯನ್ ಸೇರಿದಂತೆ ಸುಖೋಯ್ ಸು-30 ಮತ್ತಿತರ ವಿದೇಶಿ ಏರೋಬ್ಯಾಟಿಕ್ ತಂಡಗಳು ಆಕಾಶದಲ್ಲಿ ಮೈಚಳಿ ಬಿಟ್ಟು ಮಾಡಿದ ಸಾಹಸಿ ಕಸರತ್ತುಗಳು ನೋಡಗರ ಮೈ ಝಲ್ಲೆನಿಸಿತ್ತು. ಒಟ್ಟಾರೆ ದೇಶಿ ಹಾಗೂ ವಿದೇಶಿ ವಿಮಾನ ತಂಡಗಳು ನಡೆಸಿಕೊಟ್ಟ ಸಾಹಸ ಪ್ರದರ್ಶನ 11ನೇ ವೈಮಾನಿಕ ಪ್ರದರ್ಶನಕ್ಕೆ ವಿಶೇಷ ಮೆರಗು ತಂದುಕೊಟ್ಟಿತ್ತು.
ಪ್ರದರ್ಶನದ ಮೊದಲ ಮೂರು ದಿನ ದ್ವಿಪಕ್ಷೀಯ ವಾಣಿಜ್ಯ ಮಾತುಕತೆಗಳು, ಉದ್ದಿಮೆದಾರ ನಿಯೋಗಗಳ ಭೇಟಿ, ವಿಚಾರಗೋಷ್ಠಿ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಸಿಮೀತವಾಗಿತ್ತು. ಕೊನೆಯ ಎರಡು ದಿನಗಳು ಪ್ರದರ್ಶನಕ್ಕೆ ಮಾತ್ರ ಸಿಮೀತವಾಗಿತ್ತು. 270 ದೇಶಿಯ ಹಾಗೂ 279 ವಿದೇಶಿ ಕಂಪೆನಿಗಳು ಸೇರಿ ಒಟ್ಟು 549 ಕಂಪೆನಿಗಳು ವಾಣಿಜ್ಯ ಚಟುವಟಿಕೆಗಳ ಭಾಗವಾಗಿದ್ದರೆ, ದೇಶಿ-ವಿದೇಶಿ 72 ವಿಮಾನಗಳು ಮತ್ತು 16 ಏರೋಬ್ಯಾಟಿಕ್ ತಂಡಗಳು ಚಿತ್ತಾಕರ್ಷಕ ಪ್ರದರ್ಶನ ನಡೆಸಿಕೊಟ್ಟವು.
*ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಮಿಂಚಿದ್ದು “ಮೇಕ್ ಇನ್ ಇಂಡಿಯಾ’. ದೇಶೀಯ ವಿಮಾನಗಳ ಹಾರಾಟ, ವೈಮಾನಿಕ ಕ್ಷೇತ್ರದಲ್ಲಿ ದೇಶೀಯ ವಿಜ್ಞಾನಿಗಳ ಅನ್ವೇಷಣೆಗಳು, ಇಲ್ಲಿನ ಕಂಪೆನಿಗಳ ಉತ್ಪಾದನೆಗಳು ಗಮನಸೆಳೆದವು. ಕೆಲವು ವಿದೇಶಿ ಮಳಿಗೆಗಳಲ್ಲಿ ಕೂಡ “ಮೇಕ್ ಇನ್ ಇಂಡಿಯಾ’ ಫಲಕಗಳು ಕಂಡುಬಂದವು.
12ನೇ ಏರ್‌ಶೋ ಎಲ್ಲಿ?*ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಳೆದ ಬಾರಿಯ ವೈಮಾನಿಕ ಪ್ರದರ್ಶನದ ವೇಳೆ “ಏರ್ ಶೋ ಗೋವಾಕ್ಕೆ ಸ್ಥಳಾಂತರಗೊಳ್ಳಲಿದೆ’ ಎಂಬ ವದಂತಿ ಏರ್‌ಶೋ ಸ್ಥಳಾಂತರದ ಬಗ್ಗೆ “ಗೋವಾ ಗುಮ್ಮ’ ಈ ಬಾರಿಯೂ ಕಾಡಿದೆ. ಸಾಮಾನ್ಯವಾಗಿ ಮುಂದಿನ ಏರ್‌ಶೋ ನಡೆಯುವ ಸ್ಥಳ ಹಾಗೂ ದಿನಾಂಕವನ್ನು ಹಿಂದಿನ ಏರ್‌ಶೋನ ಮೊದಲ ದಿನವೇ ಘೋಷಣೆ ಮಾಡಲಾಗುತ್ತದೆ. ಆದರೆ, ಕಳೆದ ಬಾರಿಯ ಏರ್ ಶೋದಲ್ಲಿ ಸ್ಥಳ ಮತ್ತು ದಿನಾಂಕ ಘೋಷಣೆ ಮಾಡಿರಲಿಲ್ಲ. ಈ ಬಾರಿಯೂ ಮಾಡಿಲ್ಲ. ಹೀಗಾಗಿ, ಮುಂದಿನ ಏರ್‌ಶೋ ಗೋವಾಕ್ಕೆ ಸ್ಥಳಾಂತರಗೊಳ್ಳುವ ಅಂತೆ-ಕಂತೆಗಳಿಗೆ ಮತ್ತೆ ರೆಕ್ಕೆಪುಕ್ಕ ಹುಟ್ಟಿಕೊಂಡಂತಾಗಿದೆ. ಏರೋಶೋದಲ್ಲಿ ಬಂಡವಾಳ ಆಕರ್ಷಿಸಲು ಪ್ರಯತ್ನ
ಬೆಂಗಳೂರು: ಹನ್ನೊಂದನೇ ವೈಮಾನಿಕ ಪ್ರದರ್ಶನದ ವೇಳೆ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದಲ್ಲಿ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ದೇಶ-ವಿದೇಶ ಪ್ರತಿಷ್ಠಿತ ಕಂಪೆನಿಗಳ ಮನವೊಲಿಕೆಗೆ ರಾಜ್ಯ ಕೈಗಾರಿಕಾ ಇಲಾಖೆ “ಭರಪೂರ’ ಪ್ರಯತ್ನ ನಡೆಸಿತು. ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ದೇಶ-ವಿದೇಶಗಳ ಉದ್ದಿಮೆದಾರರು, ಬಂಡವಾಳ ಹೂಡಿಕೆದಾರರಿಗೆ ಇಲಾಖೆ ವತಿಯಿಂದ ವೈಮಾನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದ್ದು ಉತ್ತಮ ಸ್ಪಂದನೆ ದೊರೆತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸುಸಜ್ಜಿತ ಮಳಿಗೆಯನ್ನು ತೆರೆದಿತ್ತು. ಅಲ್ಲದೇ ಉನ್ನತ ಮಟ್ಟದ ವಾಣಿಜ್ಯ ನಿಯೋಗಗಳ ಜೊತೆಗೆ ಭೇಟಿ, ಮಾತುಕತೆ ನಡೆಸಲು ಸಭಾ ಕೋಠಡಿಯನ್ನು ವ್ಯವಸ್ಥೆಯನ್ನೂ ಮಾಡಲಾಗಿತ್ತು. ಏರ್‌ಶೋ ಉದ್ಘಾಟನಾ ಸಮಾರಂಭದ ದಿನ ಸೇರಿದಂತೆ ಮೊದಲ ಮೂರು ದಿನಗಳ ಕಾಲ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ದೇಶ-ವಿದೇಶಗಳ ವಾಣಿಜ್ಯ ನಿಯೋಗಗಳೊಂದಿಗೆ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದು ವಿಶೇಷ.