Advertisement

ವೈಮಾನಿಕ ಪರೀಕ್ಷಾ ಕೇಂದ್ರ ಇಂದು ಲೋಕಾರ್ಪಣೆ

10:11 AM May 28, 2017 | Harsha Rao |

ನಾಯಕನಹಟ್ಟಿ: ಕುದಾಪುರ ಸಮೀಪದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ)
ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವೈಮಾನಿಕ ಪರೀಕ್ಷಾ ಕೇಂದ್ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ.
ಸಂಶೋಧನಾ ಕ್ಷೇತ್ರದಲ್ಲಿ ಈಗಾಗಲೇ ರುಸ್ತುಂ-1 ಹಾಗೂ ರುಸ್ತುಂ-2 ಡ್ರೋಣ್‌ ಮಾದರಿಯ ಲಘುವಿಮಾನಗಳ
ಪ್ರಯೋಗಾರ್ಥ ಹಾರಾಟ ಇಲ್ಲಿ ಯಶಸ್ವಿಯಾಗಿದೆ. 6 ತಿಂಗಳ ಹಿಂದೆ ವೈಮಾನಿಕ ಕೇಂದ್ರದ ಉದ್ಘಾಟನೆಯನ್ನು
ನೆರವೇರಿಸಬೇಕಾಗಿತ್ತು. ಆದರೆ, ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಉದ್ಘಾಟನೆ ನೆರವೇರಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಬದಲಾದ
ರಾಜಕೀಯ ಪರಿಸ್ಥಿತಿಯಿಂದಾಗಿ ಅವರು ಗೋವಾ ಮುಖ್ಯಮಂತ್ರಿಯಾದರು. ಹೀಗಾಗಿ ಉದ್ಘಾಟನೆ ನನೆಗುದಿಗೆ ಬಿದ್ದಿತ್ತು. ಎರಡು ಬಾರಿ ಸಂಶೋಧನಾ ಕೇಂದ್ರದ ಉದ್ಘಾಟನೆ ಮುಂದೂಡಲಾಗಿತ್ತು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ.

Advertisement

200 ಎಕರೆ ಪ್ರದೇಶದಲ್ಲಿ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ:
ವರವು ಹಾಗೂ ಕುದಾಪುರ ಕಾವಲು ಪ್ರದೇಶದಲ್ಲಿ ಡಿಆರ್‌ಡಿಒಗೆ 4200 ಎಕರೆ ಜಾಗ ನೀಡಲಾಗಿದೆ. ಇದರಲ್ಲಿ 4 ಸಾವಿರ
ಎಕರೆ ಪ್ರದೇಶವನ್ನು ಸಂಶೋಧನಾ ಕ್ಷೇತ್ರಕ್ಕೆ ಅಗತ್ಯವಿರುವ ಕಟ್ಟಡ ಹಾಗೂ ಇತರ ಕಾರ್ಯಗಳಿಗೆ ಮೀಸಲಿಡಲಾಗಿದೆ.
ಇನ್ನುಳಿದ 200 ಎಕರೆಯನ್ನು ಸಿಬ್ಬಂದಿ ನಿವಾಸ ಹಾಗೂ ಸಾರ್ವಜನಿಕರ ಬಳಕೆಗೆ ಕಾಯ್ದಿರಿಸಲಾಗಿದೆ. ಸಂಶೋಧನಾ
ಪ್ರದೇಶದ ಸುತ್ತ 20 ಕಿಮೀ ಉದ್ದದ ಕಾಂಪೌಂಡ್‌ ಹಾಗೂ ಪ್ರತಿ ಒಂದು ಕಿಮೀ ದೂರದಲ್ಲಿ ವೀಕ್ಷಣಾ ಗೋಪುರಗಳನ್ನು
ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ 3.5 ಕಿಮೀ ರನ್‌ವೇ ನಿರ್ಮಾಣಗೊಂಡಿದೆ. ವಿಮಾನಗಳ
ನಿರ್ವಹಣೆಗಾಗಿ ಎರಡು ಹ್ಯಾಂಗರ್‌, ವಿಮಾನಗಳ ಹಾರಾಟ ನಿಯಂತ್ರಣಕ್ಕಾಗಿ ವಾಯು ನಿಯಂತ್ರಣ ಕೇಂದ್ರ (ಎಟಿಸಿ) ನಿರ್ಮಿಸಲಾಗಿದೆ. ಇವುಗಳ ಜತೆಗೆ ರಾಡಾರ್‌ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಸಂಶೋಧನಾ ಕ್ಷೇತ್ರವನ್ನು ಸಂಪೂರ್ಣವಾಗಿ ರಕ್ಷಣಾ ಪಡೆಗಳಿಗೆ ವಹಿಸಲಾಗಿದೆ. ಹೀಗಾಗಿ ಇಲ್ಲಿ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇಲ್ಲಿ ತಲೆ ಎತ್ತಿದೆ.

ಈಗಾಗಲೇ ಸಂಶೋಧನಾ ಪ್ರದೇಶದಲ್ಲಿರುವ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ: 200 ಎಕರೆ ಪ್ರದೇಶದಲ್ಲಿ ಸಿಬ್ಬಂದಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 100 ವಿಜ್ಞಾನಿಗಳಿಗೆ, 350 ಸೈನಿಕರಿಗೆ ತಂಗಲು ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿಗೆ ಪ್ರತ್ಯೇಕ ವಸತಿಗೃಹಗಳಿವೆ. ಇಲ್ಲಿ ಸಂಶೋಧನೆ ಕೈಗೊಳ್ಳುವ ವಿಜ್ಞಾನಿಗಳಿಗೆ ಎರಡು ಬೃಹತ್‌
ವಸತಿಗೃಹಗಳು ಹಾಗೂ ರೆಸ್ಟೋರೆಂಟ್‌ ನಿರ್ಮಿಸಲಾಗಿದೆ. ಹಿರಿಯ ಹಾಗೂ ಕಿರಿಯ ವಿಜ್ಞಾನಿಗಳಿಗೆ ಅತ್ಯಾಧುನಿಕ
ತಂತ್ರಜ್ಞಾನದ ನಿವಾಸ ನಿರ್ಮಿಸಿರುವುದು ವಿಶೇಷ.

ಜೇಟ್ಲಿಯಿಂದ ಉದ್ಘಾಟನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ ತಲೆ ಎತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ
ಸಂಸ್ಥೆಯ ವೈಮಾನಿಕ ಪರೀûಾ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ರಕ್ಷಣೆ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಭಾನುವಾರ ನೆರವೇರಿಸಲಿದ್ದಾರೆ. 4200 ಎಕರೆ ಪ್ರದೇಶದಲ್ಲಿ ವೈಮಾನಿಕ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಲ್ಲಿ 3.5 ಕಿಮೀ ಉದ್ದದ ರನ್‌ ವೇ, ಇಡೀ ಪ್ರದೇಶದ ವಾಯುಯಾನವನ್ನು ನಿಯಂತ್ರಿಸುವ ವ್ಯಾಪ್ತಿ ನಿಯಂತ್ರಣ ಕೇಂದ್ರ (ಆರ್‌ಸಿಸಿ), ವಿಮಾನದ ದುರಸ್ತಿ ಕಾರ್ಯ ನಡೆಸುವ ಎರಡು ಹ್ಯಾಂಗರ್‌ಗಳು ಹಾಗೂ ರಾಡಾರ್‌ ಕೇಂದ್ರಗಳು
ಇಲ್ಲಿವೆ. ಇವೆಲ್ಲವೂ ರಕ್ಷಣಾ ಇಲಾಖೆಗೆ ಭಾನುವಾರ ಸಮರ್ಪಣೆಯಾಗಲಿವೆ. ಸಂಜೆ 5 ಗಂಟೆಗೆ ರಕ್ಷಣಾ ಸಚಿವರು ಬೆಂಗಳೂರಿನಿಂದ ರಕ್ಷಣಾ ಪಡೆಯ ಹೆಲಿಕಾಪ್ಟರ್‌ ಮೂಲಕ ಇಲ್ಲಿನ ವೈಮಾನಿಕ ನೆಲೆಗೆ ಆಗಮಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next