Advertisement
ಏರ್ ಡೆವಿಲ್ ಹಾಗೂ ಆಕಾಶಗಂಗಾ ತಂಡ, ಪ್ಯಾರಾ ಕಮೋಂಡೋಗಳು ತಮ್ಮ ಸಾಹಸ್ನ ಪ್ರದರ್ಶಿಸಿದರು. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಆದರೆ, ಏರ್ ಶೋ ನೀಡಲು ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೊರಟಿದ್ದ ಸೇನಾ ಹೆಲಿಕಾಫ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಶ್ರೀರಂಗಪಟ್ಟಣದ ಅರಕೆರೆ ಬೋರೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ಹೀಗಾಗಿ ಏರ್ ಶೋ ಅನ್ನು ಮಧ್ಯಾಹ್ನ 12.15ಕ್ಕೆ ಮುಂದೂಡಲಾಯಿತು.
Related Articles
Advertisement
ಬಳಿಕ ಮಾಸ್ಟರ್ ವಾರಂಟ್ ಆಫೀಸರ್ ಎಸ್.ಎಸ್.ಯಾದವ್, ಸ್ಕ್ವಾಡ್ರನ್ ಲೀಡರ್ ಅಫ್ತಾಬ್ ಖಾನ್, ಜೂನಿಯರ್ ವಾರಂಟ್ ಆಫೀಸರ್ ಮುಖೇಶ್ ಮೈದಾನಕ್ಕೆ ಬಂದಿಳಿದರು. ಬಳಿಕ ಸರ್ಜೆಂಟ್ ಸಲಾರಿಯಾ ಆಕಾಶಗಂಗಾ ಧ್ವಜಹಿಡಿದು ಮೈದಾನಕ್ಕೆ ಬಂದಿಳಿದರು. ಇವರ ಬೆನ್ನಲ್ಲೇ ಎಂಡಬ್ಲ್ಯೂಓ ಚೌಹಾನ್, ಡಬ್ಲ್ಯೂಓ ಅನ್ಸಾರಿ ಬಹುವರ್ಣ ಧ್ವಜಗಳನ್ನು ಇಡಿದು ಮೈದಾನದಲ್ಲಿಳಿದರು. ಕೊನೆಗೆ ವಿಂಗ್ ಕಮಾಂಡರ್ ಬಾಳಿಗ, ಎಂಡಬ್ಲ್ಯೂಓ ಯಾದವ್, ಜೆಡಬ್ಲ್ಯೂಓ ತಿವಾರಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಯಶಸ್ವಿಯಾಗಿ ಮೈದಾನದಲ್ಲಿಳಿದರು.
ಈ ಹತ್ತು ಜನ ಯೋಧರು ಬೆನ್ನಿಗೆ ಪ್ಯಾರಚೂಟ್ ಕಟ್ಟಿಕೊಂಡು ಆಗಸದಲ್ಲಿ ನೆಗೆದ ಪೆಟಲ್ ಡ್ರಾಪಿಂಗ್ ದೃಶ್ಯ ಮೈ ರೋಮಾಂಚನಗೊಳಿಸಿತು. ಜತೆಗೆ ಪ್ಯಾರಾಚೂಟ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾಗೂ ವಾಯುಸೇನೆಯ ಧ್ವಜವನ್ನು ಪ್ರದರ್ಶಿಸಿ ದೇಶಭಕ್ತಿಯನ್ನು ಉದ್ದೀಪನಗೊಳಿಸಿದರು. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಮೂಲಕ ವೈಮಾನಿಕ ಪ್ರದರ್ಶನ ನೀಡಿದ ಯೋಧರನ್ನು ಜಿಲ್ಲಾಡಳಿತದವತಿಯಿಂದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಸ್ಮರಣಿಕೆ ನೀಡಿ ಅಭಿನಂದಿಸಿದರು. ಬಳಿಕ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅನಾಹುತ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರಂಜಿ ಮಾದರಿ, ವಾಟರ್ ಜೆಟ್, ವಾಟರ್ ಸ್ಪ್ರೆಗಳ ಮೂಲಕ ನೀರು ಹಾಕುವ ಮಾದರಿಯ ಪ್ರಾತ್ಯಕ್ಷಿಕೆ ನೀಡಲಾಯಿತು.
ಎಂಟು ಸಾವಿರ ಅಡಿ ಮೇಲಿನಿಂದ ಜಿಗಿದರು: ಎಂಟು ಸಾವಿರ ಅಡಿ ಮೇಲಿನಿಂದ ಜಿಗಿದ ಆಕಾಶಗಂಗಾ ತಂಡದಲ್ಲಿ ಹಾಸನದ ಅವಿನಾಶ್ ಮೊದಲಿಗೆ ಮೈದಾನದಲ್ಲಿ ಬಂದಿಳಿದರು. ಅವರ ಹಿಂದೆಯೇ ಒಬ್ಬರಾದ ಮೇಲೆ ಒಬ್ಬರಂತೆ ಆರು ಜನ ಬಂದಿಳಿದರು. ಅಷ್ಟರಲ್ಲಿ ಕೇಸರಿ-ಬಿಳಿ-ಹಸಿರು ಬಣ್ಣದ ಪ್ಯಾರಾಚೂಟ್ ಕಟ್ಟಿಕೊಂಡಿದ್ದ ಮೂವರು ಯೋಧರು ಒಟ್ಟಾಗಿ ಬಂದು ಪ್ಯಾರಾಚೂಟ್‌ನಲ್ಲೇ ಭಾರತದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಎಲ್ಲರು ಹರ್ಷೋದ್ಘಾರ ಮಾಡಿದರು. ಸುಮಾರು 45 ನಿಮಿಷಗಳ ವೈಮಾನಿಕ ಪ್ರದರ್ಶನದ ನಂತರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ 23 ಜನ ಯೋಧರು, ಮೈದಾನವನ್ನು ಒಂದು ಸುತ್ತು ಬಂದು ಜನರಿಗೆ ಧನ್ಯವಾದ ತಿಳಿಸಿದರು. ಪ್ರತಿಯಾಗಿ ವೀಕ್ಷಕರು ಎದ್ದು ನಿಂತು ಯೋಧರಿಗೆ ಸೆಲ್ಯೂಟ್ ಹೊಡೆದರು.
ರಾಜ್ಯದ ಯುವಕರೇ ಸೇನೆಗೆ ಸೇರಿ: ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸೇನೆ ಬಲಿಷ್ಠವಾಗಿದೆ. ಆಧುನಿಕ ಉಪಕರಣಗಳು ಸೇನೆಯ ಬತ್ತಳಿಕೆಗೆ ಸೇರಿವೆ. ಯೋಧರಿಗೆ ಅತ್ಯಾಧುನಿಕ ತರಬೇತಿ ದೊರೆಯುತ್ತಿದೆ. ಆದರೆ ವಾಯುಸೇನೆ, ಭೂ ಸೇನೆ, ನೌಕಾದಳದಲ್ಲಿ ಕರ್ನಾಟಕದವರು ಕಡಿಮೆ ಇದ್ದಾರೆ. ಹೀಗಾಗಿ ಯುವಕರು ಸೇನೆಗೆ ಸೇರಬೇಕು ಎಂದು ವಿಂಗ್ ಕಮಾಂಡರ್ ಬಾಳಿಗ ಸಲಹೆ ನೀಡಿದರು.