ಮೈಸೂರು: ‘ಎಷ್ಟೇ ಅಭಿಪ್ರಾಯ ಭೇದವಿದ್ದರೂ ಶಿವನನ್ನು ಆರಾಧಿಸುವ, ಶಿವ ಪಂಚಾಕ್ಷರಿ ಜಪವನ್ನು ಮಾಡುವ ಲಿಂಗಾಯತರು ಹಿಂದೂಗಳಾಗದಿರಲು ಸಾಧ್ಯವೇ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ‘ಹಿಂದೂ ದೇವರನ್ನು ಒಪ್ಪುವವರೆಲ್ಲ ಹಿಂದೂಗಳೇ. ಈ ಬಗ್ಗೆ ಎಲ್ಲಿ ಬೇಕಾದರೂ ಸಂವಾದಕ್ಕೆ ತಾವು ಸಿದ್ಧರಿದ್ದು, ಪ್ರತ್ಯೇಕ ಲಿಂಗಾಯತ ಧರ್ಮದ ಸಮರ್ಥಕರು ಸ್ನೇಹ ಸಂವಾದಕ್ಕೆ ಬನ್ನಿ’ ಎಂದು ಶ್ರೀಗಳು ಮತ್ತೂಮ್ಮೆ ಆಹ್ವಾನ ನೀಡಿದರು.
ವಿಷ್ಣು, ಶಿವ, ಗಣಪತಿ, ದುರ್ಗೆ ಇವರೆಲ್ಲ ಹಿಂದೂ ದೇವರು. ಇವರನ್ನು ಒಪ್ಪಿದ ಮೇಲೆ ನಾವು ಹಿಂದೂಗಳಲ್ಲ ಎಂದರೆ ಹೇಗೆ? ಹಿಂದೂ ಧರ್ಮದಿಂದ ಬೇರೆಯಾದರೆ ಲಿಂಗಾಯತರಿಗೆ ಹಾನಿ. ಅನಾದಿ ಕಾಲದಲ್ಲಿ ಎಲ್ಲರೂ ಹಿಂದೂಗಳೇ ಆಗಿದ್ದರು. ಬ್ರಿಟಿಷರ ಒಡೆದಾಳುವ ನೀತಿಯಿಂದಾಗಿ ಬೌದ್ಧ, ಜೈನ, ಸಿಖ್ ರು ಹಿಂದೂ ಧರ್ಮದಿಂದ ಬೇರಾಗಿದ್ದಾರೆ. ಹಿಂದೂ ಧರ್ಮದಿಂದ ಹೊರಹೋದವರು ಮತ್ತೆ ಬಂದು ಸೇರಿ ಹಿಂದೂ ಧರ್ಮವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಮನವಿ ಮಾಡಿದರು.
‘ಜಾಮದಾರರು, ಸಾಣೇಹಳ್ಳಿ ಸ್ವಾಮೀಜಿ, ಎಂ.ಬಿ. ಪಾಟೀಲ ಮುಂತಾದ ಪ್ರತ್ಯೇಕ ಲಿಂಗಾಯತ ಮತದ ಸಮರ್ಥಕರು ತಮಗೆ ಅನುಕೂಲ ವಾದ ಸಮಯದಲ್ಲಿ ಮೈಸೂರಿಗೆ ಆಗಮಿಸಿ ನಮ್ಮ ಜೊತೆ ಸ್ನೇಹ ಸಂವಾದ ನಡೆಸಬಹುದು ಅಥವಾ ತಾವು ಸೂಚಿಸಿದ ಸ್ಥಳದಲ್ಲಿ ನಾನೇ ಆಗಮಿಸಿ ಸಂವಾದ ನಡೆಸಲು ಸಿದ್ಧನಿದ್ದೇನೆ. ನಾನು ಲಿಂಗಾಯತರ ಸ್ನೇಹಿತನಾಗಿದ್ದೇನೆಯೇ ಹೊರತು, ವಿರೋಧಿಯಲ್ಲ’ ಎಂದರು.
‘ಗೋಹತ್ಯೆ ನಿಷೇಧ ಕಾನೂನು ಜಾರಿ, ಗಂಗಾ ನದಿ ಶುದ್ಧೀಕರಣ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡಿರುವುದಾಗಿ’ ಶ್ರೀಗಳು ಇದೇ ಸಂದರ್ಭದಲ್ಲಿ ಹೇಳಿದರು. ಇತ್ತೀಚೆಗೆ ದೆಹಲಿಯಲ್ಲಿ ಮೋದಿಯವರನ್ನು ಭೇಟಿಯಾಗಿದ್ದೆ. ಆ ವೇಳೆ ಗೋಹತ್ಯೆ ನಿಷೇಧ ಕಾನೂನು ಜಾರಿ, ಗಂಗಾ ನದಿ ಶುದ್ಧೀಕರಣ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದೇನೆ ಎಂದರು.