Advertisement

ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರನ್ನು ಬದಲಿಸುವಂತೆ ವಕೀಲರ ಸಂಘ ಆಗ್ರಹ

09:22 PM Apr 07, 2021 | Team Udayavani |

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರು ಮೃದು ವ್ಯಕ್ತಿತ್ವವುಳ್ಳವರೂ, ಜ್ಞಾನಿಗಳೂ ಆಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಬದಲಿಸಬೇಕು. ಅಧಿಕಾರಿಗಳಿಂದ ಕೆಲಸ ಮಾಡಿಸುವ ಖಡಕ್ ಸಚಿವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಿಸಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಒತ್ತಾಯಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್‌ಕುಮಾರ್ ಅವರು ಭ್ರಷ್ಟಾಚಾರ ರಹಿತ ಒಳ್ಳೆಯ ವ್ಯಕ್ತಿ ಎಂಬುದೇನೋ ಸರಿ. ಆದರೆ ಅವರು ಬಂದ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಅವರು ಜಿಲ್ಲೆಗೆ ಭೇಟಿ ನೀಡುತ್ತಾರೆ, ಹೋಗುತ್ತಾರೆಯೋ ಹೊರತು, ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸುವಲ್ಲಿ ಹಿಂದುಳಿದಿದ್ದಾರೆ ಎಂದರು.

ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು, ಇವರೇ ಉಸ್ತುವಾರಿ ಸಚಿವರಾಗಿದ್ದರೆ, ತಮ್ಮ ಕೆಲಸ ಕಾರ್ಯ ಮಾಡಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಅವರನ್ನು ಬದಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ಹಿಂದೆ ಪುಟ್ಟರಂಗಶೆಟ್ಟಿಯವರು ಉಸ್ತುವಾರಿ ಸಚಿವರಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ಹಾಗೆ ಕೆಲಸ ಮಾಡಿಸುವವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇಮಕ ಮಾಡಬೇಕು ಎಂದು ಇಂದುಶೇಖರ್ ಆಗ್ರಹಿಸಿದರು.

ಅರೆನ್ಯಾಯಿಕ ನ್ಯಾಯಾಲಯಗಳನ್ನು ರದ್ದುಪಡಿಸಿ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ದಂಡಾಧಿಕಾರಿಗಳಾಗಿರುವ  ಅರೆ ನ್ಯಾಯಿಕ ನ್ಯಾಯಾಲಯಗಳನ್ನು ರದ್ದುಪಡಿಸಬೇಕು. ಈ ನ್ಯಾಯಾಲಯಗಳು ವಾರಕ್ಕೊಮ್ಮೆ ನಿಗದಿಯಾಗಿರುತ್ತವೆ. ಅಂದು ಯಾರಾದರೂ ಸಚಿವರ ಕಾರ್ಯಕ್ರಮ, ಇನ್ನಿತರ ಕಾರ್ಯಕ್ರಮ ನಿಗದಿಯಾದರೆ, ಈ ನ್ಯಾಯಾಲಯಗಳನ್ನು ಮುಂದೂಡಲಾಗುತ್ತದೆ. ಹೀಗಾಗಿ ಪ್ರಕರಣಗಳು ವಿಳಂಬವಾಗಿ ಇತ್ಯರ್ಥವಾಗುತ್ತಿವೆ.  ಉದಾಹರಣೆಗೆ ಕಳೆದ 6 ತಿಂಗಳಿಂದ ಚಾಮರಾಜನಗರ ಉಪವಿಭಾಗಾಧಿಕಾರಿ ನ್ಯಾಯಾಲಯ ಕಲಾಪ ನಡೆದಿಲ್ಲ ಎಂದರು. ಆದ್ದರಿಂದ ಅರೆನ್ಯಾಯಿಕ ನ್ಯಾಯಾಲಯಗಳನ್ನು ರದ್ದುಪಡಿಸಿ, ಗ್ರಾಹಕ ನ್ಯಾಯಾಲಯದ ರೀತಿ, ಪ್ರತ್ಯೇಕ ಭೂಕಂದಾಯ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಒತ್ತಾಯಿಸಿದರು.

ನಗರದ ನ್ಯಾಯಾಲಯ ರಸ್ತೆಯ ಕಾಮಗಾರಿ 4 ವರ್ಷಗಳಿಂದ ಕುಂಠಿತಗೊಂಡಿದೆ. ಸಮರ್ಪಕವಾದ ಕಾಮಗಾರಿ ನಡೆಸದ ಕಾರಣ ವಿಳಂಬವಾಗುತ್ತಿದೆ. ಬಿ. ರಾಚಯ್ಯ ಜೋಡಿ ರಸ್ತೆ ಕಾಮಗಾರಿ ಅಧ್ವಾನವಾಗಿದೆ. ಅನೇಕ ಕಡೆ ಚರಂಡಿಯೇ ನಿರ್ಮಾಣಗೊಂಡಿಲ್ಲ. ಮಳೆ ಬಂದಾಗ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಈ ರೀತಿಯ ಅವ್ಯವಸ್ಥಿತ ಕಾಮಗಾರಿ ನಡೆಯಲು ಭ್ರಷ್ಟ ಅಧಿಕಾರಿಗಳು ಕಾರಣ. ಆದ್ದರಿಂದ ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ಜಿಲ್ಲೆಗೆ ನೇಮಕ ಮಾಡಬೇಕು ಎಂದು ಅವರು ಆಗ್ರಹ ಮಾಡಿದರು.

Advertisement

ಚಾಮರಾಜನಗರ ನ್ಯಾಯಾಲಯದಲ್ಲಿ 400 ಮಂದಿ ವಕೀಲರಿದ್ದೇವೆ. ಆದರೆ ವಕೀಲ ಭವನವಿಲ್ಲ. ವಕೀಲ ಕುಟುಂಬಗಳ ಕಾರ್ಯಕ್ರಮಗಳು, ಮದುವೆ, ಶುಭ ಕಾರ್ಯಕ್ರಮಗಳಿಗಾಗಿ ಒಂದು ವಕೀಲರ ಭವನವನ್ನು ಮಂಜೂರು ಮಾಡಬೇಕು. ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರಿಗೆ ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆಯಿಲ್ಲ. ಹಾಗಾಗಿ ಶಾಸಕರು, ಮಂತ್ರಿಗಳು ಗಮನ ಹರಿಸಿ, ಚಾಮರಾಜನಗರ ನ್ಯಾಯಾಲಯ ಆವರಣದಲ್ಲಿ ಕಲ್ಲು ಬೆಂಚುಗಳ ಅಥವಾ ಆಸನದ ವ್ಯವಸ್ಥೆ ಮಾಡಬೇಕು ಎಂದು ಇಂದುಶೇಖರ್ ಒತ್ತಾಯಿಸಿದರು.

ಜಿಲ್ಲೆಗೆ ಕಾನೂನು ಕಾಲೇಜು ಮಂಜೂರಾಗಿದ್ದರೂ, ಅದಕ್ಕೆ ಕಟ್ಟಡ ಕಲ್ಪಿಸಿ ಕಾಲೇಜು ಆರಂಭಿಸಿಲ್ಲ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಲಾ ಕಲಿಯಲು ಹೋಗಬೇಕಾಗಿದೆ. ಆದ್ದರಿಂದ ಜಿಲ್ಲೆಗೆ ಮಂಜೂರಾಗಿರುವ ಲಾ ಕಾಲೇಜನ್ನು ಶೀಘ್ರ ಆರಂಭಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಂ. ಶಿವರಾಮು, ಪ್ರಧಾನ ಕಾರ್ಯದರ್ಶಿ ಮಂಜು ಎಸ್ ಹರವೆ, ಜಂಟಿ ಕಾರ್ಯದರ್ಶಿ ಪಿ. ಮಂಜು, ಖಜಾಂಚಿ ನಾಗಮ್ಮ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next