ಬೆಳಗಾವಿ: ನಗರದ ಮಾಳಮಾರುತಿ ಪೊಲೀಸ್ ಠಾಣೆಗೆ ಹೋಗಿದ್ದ ನ್ಯಾಯವಾದಿಯೊಬ್ಬರಿಗೆ ಅಲ್ಲಿನ ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನ್ಯಾಯವಾದಿಗಳು ಸುಮಾರು ಮೂರು ಗಂಟೆಗಳ ಕಾಲ ರಸ್ತೆ ನಡೆ ನಡೆಸಿ ಪ್ರತಿಭಟಿಸಿದ ಪ್ರಸಂಗ ಶುಕ್ರವಾರ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರನೆ ರಸ್ತೆ ತಡೆ ನಡೆಸಿದ ವಕೀಲರು, ಕಕ್ಷಿದಾರರ ಪರ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ವಕೀಲರ ಸಂಘದ ಸದಸ್ಯ ಚೇತನ್ ಈರಣ್ಣವರ ಜೊತೆ ಮಾಳಮಾರುತಿ ಠಾಣೆಯ ಸಿಪಿಐ ಸುನೀಲ ಪಾಟೀಲ ಅಸಭ್ಯವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಡಿಸಿಪಿ ವಿಕ್ರಮ್ ಆಮ್ಟೆ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರೂ ವಕೀಲರು ರಸ್ತೆ ತಡೆ ಕೈಬಿಡಲಿಲ್ಲ. ಬದಲಾಗಿ ವಕೀಲರನ್ನು ಗೌರವಿಸದ ಸಿಪಿಐ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರ ಪ್ರತಿಭಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಬೇಕಾಯಿತು. ವಕೀಲರು ತಮ್ಮ ಪಟ್ಟು ಸಡಿಲಿಸದೇ ರಸ್ತೆ ತಡೆ ಮುಂದುವರಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಮಾಳಮಾರುತಿ ಸಿಪಿಐ ಸುನೀಲ ಪಾಟೀಲ ಕ್ಷಮೆ ಕೋರಿದರು. ನಾನು ಅವಾಚ್ಯ ಶಬ್ದಗಳನ್ನು ಬಳಸಿಲ್ಲ. ಆದರೂ ವಕೀಲರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :ಬಿಜೆಪಿಗೇ ಅರವಿಂದ ಪಾಟೀಲ ತಿರುಗುಬಾಣ
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಉಪ ಆಯುಕ್ತರು ವಕೀಲರ ಜೊತೆ ಸಂಧಾನ ಮಾತುಕತೆ ನಡೆಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.