ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ರೈತರಿಗೆ 2 ಸಾವಿರ ರೂ. ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ. ಆದರೆ ರಾಜಕೀಯ ಗಂಜಿ ಕೇಂದ್ರಗಳನ್ನು ಯಥೇತ್ಛವಾಗಿ ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 14 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ತಮ್ಮ ಆರ್ಥಿಕ ಸಲಹೆಗಾರರನ್ನಾಗಿ ಬಸವರಾಜ ರಾಯರೆಡ್ಡಿ ಅವರನ್ನು ನೇಮಿಸಿದ್ದಾರೆ.
ಗ್ಯಾರಂಟಿಗಳ ಹೊಡೆತಕ್ಕೆ ತತ್ತರಿಸಿರುವ ರಾಜ್ಯದ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸಲು ಆರ್ಥಿಕ ತಜ್ಞರನ್ನು ಈ ಹುದ್ದೆಗೆ ನೇಮಿಸುವುದರ ಬದಲು ರಾಯರೆಡ್ಡಿ ಅವರನ್ನು ಯಾಕೆ ನೇಮಿಸಲಾಗಿದೆ? ದೇಶಪಾಂಡೆ 25 ವರ್ಷಗಳ ಕಾಲ ಮಂತ್ರಿ ಯಾಗಿದ್ದವರು. ಅವರನ್ನು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಈ ಆಯೋಗದ ಅಧ್ಯಕ್ಷರಾಗಿದ್ದ ಹಾರನಹಳ್ಳಿ ರಾಮಸ್ವಾಮಿ, ವಿಜಯಭಾಸ್ಕರ್ ಅವರು ನೀಡಿದ್ದ ವರದಿಯನ್ನು ಪಡೆದು ಎಷ್ಟು ಸುಧಾರಣೆ ಮಾಡಲಾಗಿದೆ? ವಿಧಾನಸೌಧದಲ್ಲಿ ಮಾಡಬಾರದ ಕೆಲಸ ಮಾಡಿಕೊಂಡು ಯಾವ ರೀತಿ ಆಡಳಿತ ಸುಧಾರಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಚುನಾವಣೆ ಮತ್ತು ಗ್ಯಾರಂಟಿ ತಂತ್ರಗಾರಿಕೆ ಮಾಡಿದ ಎಂದು ಒಬ್ಬರಿಗೆ ಸಲಹೆಗಾರ ಹುದ್ದೆ ಕೊಟ್ಟು ಸಂಪುಟ ದರ್ಜೆ ಕರುಣಿಸಿದ್ದಾರೆ. ಇನ್ನೊಬ್ಬರನ್ನು ಮಾಧ್ಯಮ ಸಲಹೆಗಾರ ಅಂತ ಮಾಡಿಕೊಂಡು ಅವರಿಗೂ ಸಂಪುಟ ದರ್ಜೆ ನೀಡಿ¨ªಾರೆ. ಹೀಗೆ ಸುತ್ತಲೂ ಸಲಹೆಗಾರರು, ಕಾರ್ಯದರ್ಶಿಗಳನ್ನು ಇಟ್ಟುಕೊಂಡು ಜನರ ತೆರಿಗೆ ದುಡ್ಡಿನಲ್ಲಿ ಗೂಟದ ಕಾರು, ಸರಕಾರಿ ಕಚೇರಿ, ಸಿಬಂದಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಅಲ್ಪಸಂಖ್ಯಾಕ ಕಾಲನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅನುದಾನವು ಅಲ್ಪಸಂಖ್ಯಾಕರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವಲ್ಲ. ಕಮಿಷನ್ ಹೊಡೆಯುವ ದಂಧೆಗೆ ಅನುಕೂಲವಾಗುತ್ತದೆ. ಕೆಲವರನ್ನ ಖುಷಿಪಡಿಸಲು ತಾತ್ಕಾಲಿಕವಾಗಿ ಈ ರೀತಿಯ ಘೋಷಣೆ ಮಾಡುತ್ತಾರೆ. ಅದು ಜಾರಿಗೆ ಬರುವುದಿಲ್ಲ ಎಂದು ಹೇಳಿದರು.