Advertisement
ಯಡಿಯೂರಪ್ಪ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ಶಾಸಕರ ನಿಯೋಗ ಬುಧವಾರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
Related Articles
Advertisement
ರಾಜೀನಾಮೆ ಸಲ್ಲಿಸಿರುವ ಶಾಸಕರು, ಅದರ ಒಂದು ಪ್ರತಿಯನ್ನು ತಮಗೂ ಸಲ್ಲಿಸಿದ್ದಾರೆ. ಅಲ್ಲದೇ ತಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ಹಲವು ಬಾರಿ ಹೇಳಿದ್ದಾರೆ. ತಾವೂ ಸಹ ತ್ವರಿತವಾಗಿ ರಾಜೀನಾಮೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸುವಂತೆ ಸೂಚಿಸಿದ್ದೀರಿ ಎಂಬ ಮಾಹಿತಿ ಇದೆ.
ಶಾಸಕರು ಜು.6ರಂದು ರಾಜೀನಾಮೆ ನೀಡಿದರೂ ಸ್ಪೀಕರ್, ಆಡಳಿತ ಪಕ್ಷಕ್ಕೆ ಸರ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಅವರು ಶಾಸಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಜತೆಗೆ, ಕೆಲ ಸಚಿವರು ಶಾಸಕರಿರುವ ಸ್ಥಳಗಳಿಗೆ ತೆರಳಿ ಬೆದರಿಕೆ ಒಡ್ಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕದಂತಿದೆ. ಯಾವುದೇ ಶಾಸಕರು ರಾಜೀನಾಮೆ ನೀಡಿದರೆ ಅದನ್ನು ಪ್ರಶ್ನಿಸುವುದು ಎಷ್ಟು ಸರಿ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಹಾಗಾಗಿ, ಸಂವಿಧಾನಾತ್ಮಕವಾಗಿ ಸ್ಪೀಕರ್ ಅವರು ತಕ್ಷಣವೇ ರಾಜೀನಾಮೆಗಳನ್ನು ಇತ್ಯರ್ಥಪಡಿಸುವಂತೆ ತಾವು ಸಲಹೆ ನೀಡಬೇಕು. ಜತೆಗೆ, ಅಲ್ಪಮತಕ್ಕೆ ಕುಸಿದಿರುವ ಸರ್ಕಾರ ಯಾವುದೇ ಆದೇಶ, ನಿರ್ಧಾರ ಕೈಗೊಳ್ಳದಂತೆ ತಡೆಯಲು ಕ್ರಮ ವಹಿಸುವಂತೆಯೂ ಸಲಹೆ ನೀಡಬೇಕು.
ಇಂತಹ ಸಂದರ್ಭದಲ್ಲಿ ಪ್ರತಿಪಕ್ಷವಾಗಿ ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು ತಾವು ಸಂವಿಧಾನಾತ್ಮಕವಾಗಿ ಸೂಕ್ತ ಕ್ರಮವನ್ನು ತ್ವರಿತವಾಗಿ ಕೈಗೊಳ್ಳುವ ನಿರೀಕ್ಷೆ ಇದೆ. ಹಾಗೆಯೇ ಆಡಳಿತ ಪಕ್ಷ ಹಾಗೂ ಸ್ಪೀಕರ್‌ಗೆ ಮಾರ್ಗದರ್ಶನ ಮಾಡುವ ವಿಶ್ವಾಸವಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸ್ಪೀಕರ್‌ಗೆ ನಿರ್ದೇಶನ ನೀಡಲು ಮನವಿ: ರಾಜ್ಯಪಾಲರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲರಿಗೆ ಎರಡು ವಿಚಾರಗಳ ಬಗ್ಗೆ ಮನವಿ ಮಾಡಲಾಗಿದೆ. ಕಾಂಗ್ರೆಸ್, ಜೆಡಿಎಸ್‌ನ 14 ಮಂದಿ ರಾಜೀನಾಮೆಯಿಂದ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಕೂಡಲೇ ತಾವು ಮಧ್ಯಪ್ರವೇಶಿಸಿಬೇಕು.
ರಾಜೀನಾಮೆ ಇತ್ಯರ್ಥಪಡಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ಭಾವನೆ ಬರುತ್ತಿದ್ದು, ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸ್ಪೀಕರ್‌ಗೆ ಸೂಚನೆ ನೀಡಬೇಕು. ಹಾಗೆಯೇ, ಯಾವುದೇ ಶಾಸಕರು ರಾಜೀನಾಮೆ ಸಲ್ಲಿಸಲು ಹೋದರೆ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.