ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ನೆರೆ ಪರಿಹಾರ ವಿತರಣೆ, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿ ಸೇರಿದಂತೆ ಇತರ ಪ್ರಮುಖ ವಿಚಾರಗಳು ಪ್ರಸ್ತಾಪವಾದರೆ ಅಂಕಿ-ಸಂಖ್ಯೆ ಸಹಿತವಾಗಿ ಮಾಹಿತಿ ನೀಡಿ. ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಾಗಿ ಸಮರ್ಥವಾಗಿ ವಿ ಷಯ ಮಂಡಿಸಬೇಕು ಎಂದು ಸಿಎಂ ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.
ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಯಡಿಯೂರಪ್ಪ ಅವರು ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಕೆಲ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿರುವ ಬಗ್ಗೆ ಮಾಹಿತಿ ನೀಡಬೇಕು.
ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್ ಹಾಗೂ ಜೆ.ಸಿ.ಮಾಧುಸ್ವಾಮಿಯವರು ಅಂಕಿಸಂಖ್ಯೆ ಸಹಿತವಾಗಿ ಸಮರ್ಥಿಸಿಕೊಳ್ಳಬೇಕು. ಈವರೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯ, ಬಿಡುಗಡೆ ಮಾಡಿರುವ ಅನುದಾನ, ಕೇಂದ್ರ ನೀಡಿರುವ ಮಧ್ಯಂತರ ಪರಿಹಾರದ ಬಗ್ಗೆಯೂ ವಿಷಯ ಮಂಡಿಸುವಂತೆ ಸೂಚನೆ ನೀಡಿದ್ದಾರೆನ್ನಲಾಗಿದೆ.
ನಿಗಮ, ಮಂಡಳಿ ಅಧ್ಯಕ್ಷರ ಆಯ್ಕೆ ಸಂಬಂಧ ಪಕ್ಷ ತೀರ್ಮಾನ ಕೈಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡವರಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಸ್ಥಾನ ನೀಡಲಾಗಿದೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ