ರಾಯಚೂರು: ಸರ್ಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುವ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನಸ್ನೇಹಿ ಆಡಳಿತ ನೀಡಬೇಕು. ಮುಖ್ಯವಾಗಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಕೆಲಸ ಮಾಡಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ವಿಜಯಕುಮಾರ್ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸಿಬಿ ಬೆಂಗಳೂರು ಕಚೇರಿ ನಿರ್ದೇಶನದ ಮೇರೆಗೆ ರಾಜ್ಯಾದ್ಯಂತ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಯಚೂರಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಜಾಗೃತಿ ಅರಿವು ಸಪ್ತಾಹ ನಡೆಸಲಾಗಿದೆ. ಪ್ರತಿ ಸರ್ಕಾರಿ ಕಚೇರಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ನಗರದ ಪಿಯು ಕಾಲೇಜ್, ಟ್ರಾಫಿಕ್ ಠಾಣೆಯಲ್ಲಿ ಈಗಾಗಲೇ ಕಾರ್ಯಕ್ರಮ ನಡೆಸಿದ್ದು, ಈಗ ತಹಸೀಲ್ ಕಚೇರಿಯಲ್ಲಿ ಸಪ್ತಾಹ ಮಾಡಲಾಗಿದೆ. ಮುಂದೆ ಸಿಂಧನೂರು, ಮುದಗಲ್ಲ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಸಾರ್ವಜನಿಕರು ತಮಗೆ ಸಮಸ್ಯೆಯಾದಲ್ಲಿ, ಸರ್ಕಾರಿ ಕೆಲಸ ಮಾಡಿಕೊಡಲು ಹಣ ಕೇಳಿದಲ್ಲಿ ನಮಗೆ ದೂರು ನೀಡಬಹುದು ಎಂದರು.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು; ಅಣ್ಣಾವ್ರ ಮಗನಿಂದ ನೇತ್ರದಾನ
ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್ ಮಾತನಾಡಿ, ಜನರಿಗೆ ಉತ್ತಮ, ತ್ವರಿತ ಸೇವೆ ನೀಡುವುದು ನಮ್ಮ ಮೊದಲ ಕರ್ತವ್ಯ ಆಗಬೇಕು. ಜನ ವಿವಿಧ ಕೆಲಸಗಳ ನಿಮಿತ್ತ ಕಚೇರಿಗೆ ಬರುತ್ತಾರೆ. ಅವರನ್ನು ವಿನಾಕಾರಣ ತಿರುಗಿಸದೆ ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು. ಜನರಿಗೆ ಉತ್ತಮ ಸೇವೆ ನೀಡುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ವೇಳೆ ಪ್ರಾಮಾಣಿಕ, ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಎಸಿಬಿ ಇನ್ಸಪೆಕ್ಟರ್ ಪ್ರದೀಪಕುಮಾರ್ ಸೇರಿದಂತೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.