ಇಂಡಿ: ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಐಟಿಐ ಗಳನ್ನು ತಂತ್ರಜ್ಞಾನ ಕೇಂದ್ರಗಳನ್ನಾಗಿ ಉನ್ನತೀಕರಿಸಿರುವ ಯೋಜನೆಯ ಲಾಭ ಯುವಕರು ಪಡೆದುಕೊಳ್ಳಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಐಟಿಐ ಕಾಲೇಜಿನಲ್ಲಿ ಟಾಟಾ ಸಮೂಹದೊಂದಿಗೆ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ ಐಟಿಐ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟಾಟಾ ಟೆಕ್ನಾಜೀಸ್ ಸಂಸ್ಥೆ ಅನೇಕ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ದೇಶದ ಬೆಳವಣೆಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕವಾಗಿ ಯುವಕರಿಗೆ ಸಹಾಯ ಮಾಡುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಸ್ನೇಹಿಯಾಗಿ ಕಾರ್ಯ ಮಾಡಿದ್ದಾರೆ ಎಂದರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಯುವಕರು ಹೊಸ ಆವಿಷ್ಕಾರದ ಅವಕಾಶ ಸದುಪಯೋಗ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಸರ್ಕಾರ 480 ಕೋಟಿ ವೆಚ್ಚದಲ್ಲಿ 150 ಕಾಲೇಜುಗಳಲ್ಲಿ ಐಟಿಐ ಓದುವ ಮಕ್ಕಳಿಗೆ ಟಾಟಾ ಸಮೂಹದೊಂದಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಿದ್ದು ಅದರ ಲಾಭ ಪಡೆದುಕೊಳ್ಳಬೇಕೆಂದರು.
ಪ್ರಾಚಾರ್ಯ ಪಿ.ವೈ. ರಜನೀಕರ, ಸಂತೋಷ ಬಂಡೆ, ಮಹೇಶ ಬಿರಾದಾರ, ಗಂಗಾಧರ ಬಾಗೆಳ್ಳಿ, ರಮೇಶ ಮೇತ್ರಿ ಮಾತನಾಡಿದರು. ವಿದ್ಯಾರ್ಥಿಗಳಾದ ಸದಾನಂದ ತಳವಾರ, ತೌಶಿಫ್ ಚಪ್ಪರಬಂದ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಜಾವೇದ್ ಮೋಮಿನ್, ಗುರನಗೌಡ ಪಾಟೀಲ, ಎಂ.ಎ. ಮಠ, ಭಾಗ್ಯಜ್ಯೋತಿ ಮತ್ತಿತರರಿದ್ದರು.