Advertisement

ಚಾರ್ಮಾಡಿ ಅಥವಾ ಕಕ್ಕಿಂಜೆಯಲ್ಲಿ ಹೊರಠಾಣೆ ತೆರೆಯಲು ಸಲಹೆ

03:35 AM Jun 29, 2017 | |

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಚಾರ್ಮಾಡಿಯಲ್ಲಿ ಪೊಲೀಸ್‌ ಹೊರಠಾಣೆಯನ್ನು ತೆರೆಯುವ ಬಗ್ಗೆ  ಪ್ರಸ್ತಾವಿತ ಚಾರ್ಮಾಡಿ ಪೊಲೀಸ್‌ ಹೊರಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಚಿಬಿದ್ರೆ, ಚಾರ್ಮಾಡಿ, ತೋಟತ್ತಾಡಿ, ಮುಂಡಾಜೆ, ನೆರಿಯಾ ಗ್ರಾಮಗಳ ಸಾರ್ವಜನಿಕರ ಜನಾಭಿಪ್ರಾಯವನ್ನು ಚಾರ್ಮಾಡಿ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಪ‌ಡೆಯಲಾಯಿತು.

Advertisement

ಈ ಸಭೆಯಲ್ಲಿ ಹಾಜರಿದ್ದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಲ್ಲಿ ಕೆಲವರು ಚಾರ್ಮಾಡಿಯಲ್ಲಿಯೇ ರಠಾಣೆಯನ್ನು ಆರಂಭಿಸುವಂತೆಯೂ ಇನ್ನು ಕೆಲವರು ಕಕ್ಕಿಂಜೆಯಲ್ಲಿ ಹೊರಠಾಣೆ ತೆರೆಯುವಂತೆಯೂ ಅಭಿಪ್ರಾಯ ವ್ಯಕ್ತಪಡಿಸಿದರು.

ಕಕ್ಕಿಂಜೆಯೇ ಸೂಕ್ತ 
ಚಾರ್ಮಾಡಿ ಪಂಚಾಯತ್‌ ಮಾಜಿ ಅಧ್ಯಕ್ಷ  ಎ.ಮಮ್ಮಿಕುಂಞಿ ಮಾತನಾಡಿ “ಧರ್ಮಸ್ಥಳ ಪೊಲೀಸ್‌ ಠಾಣೆಗೆ ಒಳಪಟ್ಟ ಪ್ರಸ್ತಾವಿತ ಹೊರಠಾಣೆಯನ್ನು ಚಿಬಿದ್ರೆ ಗ್ರಾಮದ ಕಕ್ಕಿಂಜೆ ಪೇಟೆಯಲ್ಲಿಯೇ ಮಾಡಿದರೆ ನೆರಿಯ, ತೋಟತ್ತಾಡಿ, ಮುಂಡಾಜೆ ಗ್ರಾಮದ ಸಾರ್ವಜನಿಕರಿಗೆ ಹತ್ತಿರವಾಗುತ್ತದೆ. ಅಲ್ಲದೆ ಕಕ್ಕಿಂಜೆ ಪೇಟೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಪೊಲೀಸ್‌ ಹೊರಠಾಣೆಯ ಅತೀ ಆವಶ್ಯಕತೆಯಾಗಿದೆ’ ಎಂದವರು ತಿಳಿಸಿದರು.

ತಾ.ಪಂ. ಸದಸ್ಯ ಕೊರಗಪ್ಪ ಗೌಡ ಚಾರ್ಮಾಡಿ ಅವರು ಮಾತನಾಡಿ “ಧರ್ಮಸ್ಥಳ ಪೊಲೀಸ್‌ ಠಾಣೆಗೆ ಒಳಪಟ್ಟ ಪ್ರಸ್ತಾವಿತ ಹೊರ ಠಾಣೆಗೆ 50 ಸೆಂಟ್ಸ್‌ ಜಾಗವನ್ನು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಮೀಸಲಿಡಲು ನಿರ್ಣಯಿಸಲಾಗಿದೆ’ ಎಂದರು. “ಚಾರ್ಮಾಡಿಯಲ್ಲಿ ಈಗ ಇರುವ ಚೆಕ್‌ಪೋಸ್ಟ್‌ ಅಲ್ಲೇ ಇರುವುದು ಸೂಕ್ತ. ಪ್ರಸ್ತಾವಿತ ಹೊರಠಾಣೆಯನ್ನು ಚಿಬಿದ್ರೆ ಗ್ರಾಮದ ಕಕ್ಕಿಂಜೆಯಲ್ಲಿ ಪ್ರಾರಂಭಿಸುವುದು ಉತ್ತಮವಾಗಿದ್ದು ನೆರಿಯ, ತೋಟತ್ತಾಡಿ, ಮುಂಡಾಜೆ ಹಾಗೂ ಚಾರ್ಮಾಡಿ ಗ್ರಾಮದವರಿಗೆ ಕೇಂದ್ರವಾಗಿರುತ್ತದೆ’ ಎಂದು ನೆರಿಯ ಪಂಚಾಯತ್‌ ಅಧ್ಯಕ್ಷ ಪಿ. ಮಹಮ್ಮದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಅಕ್ರಮಕ್ಕೆ ಕಡಿವಾಣ ಹಾಕಿ
ಬಜರಂಗ ದಳ ಸಂಚಾಲಕ ಗಣೇಶ್‌ ಕೋಟ್ಯಾನ್‌ ಅವರು ಮಾತನಾಡಿ “ಕಾನೂನು ಬಾಹಿರ ಚಟುವಟಿಕೆ, ಅಕ್ರಮ ಗೋ ಸಾಗಾಟಗಳಿಂದಾಗಿ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುತ್ತಿದ್ದು, ಇವುಗಳನ್ನು ತಡೆಗಟ್ಟಲು ಪ್ರಸ್ತುತ ಇರುವ ವಾಹನ ತಪಾಸಣ ಸ್ಥಳದಲ್ಲಿಯೇ ಪೊಲೀಸ್‌ ಹೊರಠಾಣೆ ಅಗತ್ಯವಾಗಿದೆ’ ಎಂದರು. ಮುಂಡಾಜೆ ಗ್ರಾಮವನ್ನು ಬೆಳ್ತಂಗಡಿ ಠಾಣಾ ವ್ಯಾಪ್ತಿಗೆ ಸೇರಿಸಬೇಕು. ಇಲ್ಲವಾದ್ದಲ್ಲಿ ಚಾರ್ಮಾಡಿ ಅಥವಾ ಕಕ್ಕಿಂಜೆಯಲ್ಲಿ ಹೊರಠಾಣೆಯನ್ನು ನಿರ್ಮಿಸಬೇಕು. ಇಲ್ಲಿ ಅರ್ಜಿ ವಿಚಾರಣೆ, ಪಾಸ್‌ಪೋರ್ಟ್‌ ಪರಿಶೀಲನೆ, ಧ್ವನಿವರ್ಧಕ ಬಳಕೆಗೆ ಪರವಾನಿಗೆಗೆ, ಕ್ರೀಡಾ ಪರವಾನಿಗೆಗೆ ಧರ್ಮಸ್ಥಳ ಠಾಣೆಗೆ ಅಲೆಯುವುದು ನಿಲ್ಲಬೇಕು ಎಂದು ಯಂಗ್‌ ಚಾಲೆಂಜರ್ಸ್‌ ನ್ಪೋರ್ಟ್ಸ್ ಕ್ಲಬ್‌ ಸಂಚಾಲಕ ನಾಮದೇವ್‌ ಮುಂಡಾಜೆ ಹೇಳಿದರು.

Advertisement

ನೆರಿಯ ತಾ.ಪಂ. ಸದಸ್ಯ ವಿ. ಟಿ. ಸೆಬಾಸ್ಟಿಯನ್‌, ಪೊಲೀಸರು ಹೆಚ್ಚು ವಾಹನ ತಪಾಸಣೆ ಮಾಡಬೇಕು. ಚಾಲನಾ ಪರವಾನಿಗೆ ಇಲ್ಲದೆ ಮಕ್ಕಳು ವಾಹನ  ಚಲಾಯಿಸಿ ಅವಘಡಗಳು ನಡೆಯುತ್ತಿವೆ ಎಂದರು. ದೇಜಪ್ಪ ಪೂಜಾರಿ, ಕೆ.ಎ ಉಮ್ಮರ್‌ , ಜಿಲ್ಲಾ ಪಂಚಾಯತ್‌  ಸದಸ್ಯೆ  ನಮಿತಾ, ಸಮಾಜಸೇವಕ ಹಸನಬ್ಬ ಮಾತನಾಡಿ, ಚಾರ್ಮಾಡಿಯಲ್ಲಿ ಹೊರಠಾಣೆಯಾದಲ್ಲಿ  ಘಾಟಿ ರಸ್ತೆಯಲ್ಲಿ ಆಗುವ ಅಪಘಾತದ  ವೇಳೆ  ಪೊಲೀಸರು ಶೀಘ್ರವಾಗಿ ಸ್ಥಳಕ್ಕೆ 
ಆಗಮಿಸಿ ಸಂಚಾರ ನಿಯಂತ್ರಣ ಹಾಗೂ ಗಾಯಾಳುಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಿ ಅವರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದವರು ತಿಳಿಸಿದರು. ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ, ಧರ್ಮಸ್ಥಳ ಎಸ್‌ಐ ರಾಮ ನಾೖಕ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next