ಸಿಂದಗಿ: ಜಾನುವಾರುಗಳ ಆರೋಗ್ಯ ಕಾಪಾಡುವುದು ಪ್ರತಿ ರೈತರ ಕರ್ತವ್ಯ ಎಂದು ಸಿಂದಗಿ ಪಶು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ| ಮಾರುತಿ ತಡಲಗಿ ಹೇಳಿದರು.
ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಜಿಪಂ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಿಂದಗಿ ಸಂಯುಕ್ತಾಶ್ರಯದಲ್ಲಿ ನಡೆದ ಬರಡು ದನಗಳ ಚಿಕಿತ್ಸಾ ಶಿಬಿರ ಮತ್ತು ಕಿಸಾನ್ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಜಾನುವಾರಗಳಿಗೆ ಚಿಕಿತ್ಸೆ ನೀಡಿ ಅವರು ಮಾತನಾಡಿದರು.
ಜಾನುವಾರುಗಳ ಮೂಕ ಪ್ರಾಣಿಗಳಾಗಿದ್ದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಇತ್ತೀಚೆಗೆ ರಾಜ್ಯದಲ್ಲಿ ಲಿಂಪಿ ಸ್ಕಿನ್‌ಡಿಸಿಸ್ ಪಕ್ಕದ ಕಲಬುರಗಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿದೆ. ಸಿಂದಗಿ ತಾಲೂಕು ಕಲಬುರಗಿ ಜಿಲ್ಲೆಗೆ ಹೊಂದಿಕೊಂಡಿರುವುದರಿಂದ ಜಾನುವಾರು ಹೊಂದಿದ ರೈತರು ಜಾಗೃತರಾಗಿರಬೇಕು ಎಂದು ಹೇಳಿದರು.
ಕ್ಯುಲೆಕ್ಸ್ ಮತ್ತು ಏಡಿಸ್ ಸೊಳ್ಳೆಗಳಿಂದ, ಕಚ್ಚುವ ನೋಣಗಳಿಂದ, ಉಣ್ಣೆಗಳಿಂದ,ರೋಗಗ್ರಸ್ತ ಜಾಣುವಾರುಗಳಿಂದ ಲಿಂಪಿ ಸ್ಕಿನ್ ಡಿಸಿಸ್ ಹರಡುತ್ತದೆ. ಆದ್ದರಿಂದ ಈ ರೋಗ ಲಕ್ಷಣಗಳನ್ನು ಕಂಡು ಬಂದಲ್ಲಿ ರೋಗಗ್ರಸ್ತ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಬೇಕು. ಪ್ರತ್ಯೇಕವಾಗಿ ನೀರು, ಮೇವು ನೀಡಬೇಕು. ಆಗ ರೋಗಗ್ರಸ್ತ ಜಾನುವಾರುಗಳು ಗುಣಮುಖವಾಗುತ್ತವೆ. ಅಲ್ಲದೆ ಬೇರೆ ಜಾನುವಾರುಗಳಿಗೆ ರೋಗ ಹರಡುವುದಿಲ್ಲ. ಈ ರೋಗದಿಂದ ಜಾನುವಾರುಗಳಿಗೆ ಯಾವುದೇ ಅಪಾಯವಿಲ್ಲ. ರೈತರು ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಜಾನುವಾರುಗಳ ಕೊಟ್ಟಿಗೆ, ನೀರು ಕುಡಿಸುವ ದಾವಣಿ ಸ್ವತ್ಛತೆಯಿಂದ ಕಾಪಾಡಬೇಕು. ಜಾನುವಾರುಗಳಲ್ಲಿ ಜ್ವರ, ಚರ್ಮದಲ್ಲಿ ಗಂಟು, ಕಾಲುಗಳಲ್ಲಿ ಊತ, ಜೊಲ್ಲು ಸೋರುವುದು, ಎದೆಯಲ್ಲಿ ಬಾವು ಮುಂತಾದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೆ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ನೂರಕ್ಕು ಹೆಚ್ಚು ಜಾನುವಾರುಗಳಿಗೆ ಮತ್ತು 30ಕ್ಕೂ ಹೆಚ್ಚು ಲಿಂಪಿ ಸ್ಕಿನ್ ಡಿಸಿಸ್ ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು. ನಂತರ ಗ್ರಾಮದ ಸುತ್ತಲಿನಿ ಹೊಲಗಳಿಗೆ ಹೋಗಿ ಅಲ್ಲಿ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಪರೀಕ್ಷಕ ಡಾ| ಆರ್.ಎಂ. ಕುಬಕಡ್ಡಿ ಚಿಕಿತ್ಸೆ ನೀಡಿದರು. ರೈತರಾದ ಕುಮಾರಗೌಡ ಬಿರಾದಾರ, ಮುತ್ತು ಪೊಲಾಸಿ, ಗೋಲ್ಲಾಳಪ್ಪ ಪಟ್ಟಣದ, ಮಲ್ಲು ಯಾಳಗಿ, ಶಿವಣ್ಣ ಪೊಲಾಸಿ, ಸಕ್ರೆಪ್ಪ ಕೋರಿ, ಹನುಮಂತ್ರಾಯಗೌಡ ಬಿರಾದಾರ, ದಾವಲಸಾಬ ಯಡ್ರಾಮಿ,ನಿಂಗಪ್ಪ ಪೊಲಾಸಿ, ಮಲ್ಲಪ್ಪ ಪೊಲಾಸಿ, ಅಪ್ಪಾಸಾಹೇಬ ಚನ್ನೂರ, ಭೀಮಣ್ಣ ಚನ್ನೂರ, ಮುದಕಪ್ಪ ಮೂಲಿಮನಿ, ನಾನಾಗೌಡ ಬಿರಾದಾರ, ಗುರುಬಸಪ್ಪ ಹಿರೆಗೋಗಿ ಸೇರಿದಂತೆ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು