ರಾಣಿಬೆನ್ನೂರ: ಕೃಷಿ ಪ್ರಭಲವಾಗಿದ್ದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಸರ್ಕಾರ ರೈತರಿಗೆ ಮೂಲ ಸೌಲಭ್ಯ ಒದಗಿಸಲು ಮುಂದಾಗಿದ್ದು, ಇದರ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಮಳೆಗಾಲದಲ್ಲಿ ರೈತರಿಗೆ ಅಪ್ಪರ್ ತುಂಗಾ ಕಾಲುವೆಯಿಂದ ಆಗುವ ತೊಂದರೆ ಕುರಿತು ತಾಲೂಕಿನ ಚಿಕ್ಕಮಾಗನೂರ ಗ್ರಾಮದ ಅಪ್ಪರ್ ತುಂಗಾ ಕಾಲುವೆ ಹಾಗೂ ಸಂಪರ್ಕ ರಸ್ತೆ ವೀಕ್ಷಿಸಿ ಮಾತನಾಡಿದ ಅವರು, ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಬಹುತೇಕ ವಿದ್ಯಾವಂತರು ಇನ್ನು ಮುಂದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದನ್ನು ಭವಿಷ್ಯದಲ್ಲಿ ಕಾಣಬಹುದು ಎಂದರು.
ಇದರಿಂದ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಲಿದೆ. ಇನ್ನು ಮುಂದೆ ಕೃಷಿ ಒಂದು ಉದ್ದಿಮೆಯಾಗಿ ಪರಿವರ್ತನೆಯಾಗಲಿದೆ. ಇದರ ಪೂರ್ವಕವಾಗಿ ಸರ್ಕಾರ ರೈತರಿಗೆ ವಿದ್ಯುತ್ ಮತ್ತು ನೀರಾವರಿ ಸೌಲಭ್ಯ ಸೇರಿದಂತೆ ಪಶು ಸಾಕಾಣಿಕೆ ಉತ್ತೇಜನ ನೀಡಲಿದೆ. ಆದಕಾರಣ ಯುವಕರು ಬೆಳೆ ವೈಜ್ಞಾನಿಕವಾಗಿ ಬೆಳೆಯಲು ಮುಂದಾಗಬೇಕು ಎಂದರು.
ಅಪ್ಪರ್ ತುಂಗಾ ಕಾಲುವೆಯಿಂದ ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ನೀರು ಹರಿಸಲಾಗುವುದು. ಮಳೆಗಾಲದಲ್ಲಿ ಕಾಲುವೆ ಒಡೆದು ರೈತರ ಬೆಳೆ ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಮುಖ್ಯ ಕಾಲುವೆಯಿಂದ ಉಪಕಾಲುವೆ ಮೂಲಕ ನೀರು ಹರಿಸಲು ಹಾಗೂ ಉಪಕಾಲುವೆಗಳನ್ನು ಸದ್ಯದಲ್ಲಿಯೇ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದರು.
ಅಪ್ಪತುಂಗಾ ಯೋಜನೆಯ ಅಭಿಯಂತರ ಆನಂದ ಕುಲಕರ್ಣಿ, ರವಿಕುಮಾರ ಟಿ., ಮನು ಕೆ. ಮತ್ತು ರೈತರಾದ ಸಿದ್ದಣ್ಣ ಕೆಂಚಕ್ಕನವರ, ರಮೇಶ ಯಡಚಿ, ಶಿವನಾಗಪ್ಪ ಕಿಟ್ಟದ, ಜಯಣ್ಣ ಕರೆಡೇರ, ಮಹೇಶ ಸಿರಗೇರಿ ಮತ್ತಿತರರು ಇದ್ದರು.