ಕಲಬುರಗಿ: ಜಿಲ್ಲೆಯಲ್ಲಿ ಕಬ್ಬಿನ ಬೆಳೆಗೆ ಕಳೆದ ಹಲವು ದಿನಗಳಿಂದ ಗೊಣ್ಣೆ ಹುಳುವಿನ ಮತ್ತು ಶಂಕದ ಹುಳುವಿನ ಕಾಟ ಹೆಚ್ಚಾಗಿದೆ. ಇದರಿಂದಾಗಿ ಕಬ್ಬು ಬೆಳೆದ ರೈತರಲ್ಲಿ ಆತಂಕ ಎದುರಾಗಿದೆ.
ಜಿಲ್ಲೆಯ ಆಳಂದ, ಅಫಜಲಪುರ ಮತ್ತು ಜೇವರ್ಗಿ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಗೊಣ್ಣೆ ಹುಳು ಕಾಣಿಸಿಕೊಂಡಿದೆ. ಅತಿಯಾದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಕಬ್ಬು, ಸೋಯಾ ಮತ್ತು ಇತರೆ ಹಣ್ಣಿನ ಬೆಳೆಯಲ್ಲಿ ಈ ಹುಳು ಹೆಚ್ಚಾಗಿ ಕಂಡು ಬರುತ್ತಿದೆ. ಅದರ ಜತೆಯಲ್ಲಿ ಬಸವನ ಹುಳು ಅಥವಾ ಶಂಕದ ಹುಳು ಕೂಡ ಬೆಳೆಗಳಿಗೆ ಹಾನಿ ಉಂಟು ಮಾಡುತ್ತಿದೆ. ಇದರಿಂದಾಗಿ ತಡವಾದರೂ ಪರವಾಗಿಲ್ಲ, ಈ ಬಾರಿಯ ಮುಂಗಾರಿಗೆ ಚೆನ್ನಾಗಿ ಮಳೆಯಾಗಿದ್ದರೂ, ಹುಳುವಿನ ಕಾಟದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಪಡೆಯುತ್ತೇವೋ ಇಲ್ಲವೋ ಎನ್ನುವ ಧಾವಂತದಲ್ಲಿ ರೈತರು ದಿನ ದೂಡುವಂತಾಗಿದೆ.
35ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ: ಜಿಲ್ಲೆಯಲ್ಲಿ ಒಟ್ಟು 35ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಕಬ್ಬು, 24ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸೋಯಾ ಬೆಳೆ ಬೆಳೆಯಲಾಗಿದೆ. ಆರಂಭದಲ್ಲಿ ಮಳೆ ಮುನ್ಸೂಚನೆ ಚೆನ್ನಾಗಿರುವುದರಿಂದ ಈ ಬಾರಿ ಸೋಯಾ ಬೆಳೆ ಕ್ಷೇತ್ರ ಹೆಚ್ಚು ವಿಸ್ತಾರಗೊಂಡಿದೆ. ಕೆಲವು ವಾರಗಳಿಂದ ಕಬ್ಬು ಒಣಗುತ್ತಿದೆ. ಕಾರಣ ನೋಡಿದಾಗ ಗೊಣ್ಣೆ ಹುಳುವಿನ ಬಾಧೆ ಉಂಟಾಗಿದೆ. ಸೋಯಾದ ಬೇರುಗಳಲ್ಲೂ ಗೊಣ್ಣೆ ಮತ್ತು ಬಸವನ ಹುಳುವಿನ ಕಾಟ ಕಂಡುಬಂದಿದೆ. ಪ್ರಮುಖವಾಗಿ ಆಳಂದ ತಾಲೂಕಿನ ಸಾವಳೇಶ್ವರ, ಸುಂಟ ನೂರು, ಅಫಜಲಪುರ ತಾಲೂಕಿನ ಮೇಳಕುಂದಾ (ಕೆ), ಮೇಳಕುಂದಾ(ಬಿ), ಗೊಬ್ಬೂರು, ಅಫಜಲಪುರ, ಅತನೂರು, ಮಾಶ್ಯಾಳ ಸೇರಿದಂತೆ ಹಿರೇಜೇವರ್ಗಿ ವಲಯದಲ್ಲೂ ಗೊಣ್ಣೆ ಹುಳು ಕಾಣಿಸಿಕೊಂಡಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಗೊಣ್ಣೆ ಹುಳು ಕಾಣಿಸಿಕೊಳ್ಳುತ್ತದೆ. ಇದು ಕಬ್ಬು, ಸೋಯಾ, ದಾಳಿಂಬೆ, ಡ್ರಾಗ್ಯಾನ್ ಹಣ್ಣು ಸೇರಿದಂತೆ ಇತರೆ ಎಲ್ಲ ಬೆಳೆ ಯಲ್ಲಿ ಕಂಡು ಬರುತ್ತದೆ. ನಿರ್ವಹಣೆ ಮಾಡದೇ ಇದ್ದರೆ ಸಂಪೂರ್ಣ ಬೆಳೆ ನಾಶ ಮಾಡುವ ದೈತ್ಯ ಹುಳು. ಇದರ ನಿರ್ವಹಣೆಗೆ ಮೈಟಾರೈಝಿಯಂ ಅನಿಸೋಪ್ಲಿಯ ಶಿಲೀಂದ್ರವನ್ನು ಎಕೆರೆಗೆ 2ರಿಂದ 3ಕೆಜಿಯಂತೆ ಬಳಕೆ ಮಾಡುವು ದರಿಂದ ಹತೋಟಿ ಸಾಧ್ಯ.
-ಡಾ|ರಾಜು ತೆಗ್ಗಳ್ಳಿ, ವಿಜ್ಞಾನಿ, ಕೆವಿಕೆ, ಕಲಬುರಗಿ
-ಸೂರ್ಯಕಾಂತ್ ಎಂ.ಜಮಾದಾರ