ರಾಣೆಬೆನ್ನೂರು: ಬಹು ವಾರ್ಷಿಕ ಏಕದಳ ಮತ್ತು ಬಹು ವಾರ್ಷಿಕ ದ್ವಿದಳ ಮೇವು ಬೆಳೆಯುವುದರಿಂದ ಹೈನುಗಾರಿಕೆ ರೈತರಿಗೆ ಪದೇ ಪದೆ ಭೂಮಿ ಸಿದ್ಧತೆ ಮತ್ತು ಬೇಸಾಯದ ಕ್ರಮಗಳನ್ನು ಮಾಡುವುದು ತಪ್ಪುತ್ತದೆ. ಈ ಸುಧಾರಿತ ತಳಿಯ ಮೇವನ್ನು ಜಾನುವಾರುಗಳಿಗೆ ನೀಡುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಹನುಮನಮಟ್ಟಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ| ಅಶೋಕ ಪಿ. ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಚೌಡಯ್ಯದಾನಪುರ ಗ್ರಾಮದ ಪ್ರಗತಿಪರ ರೈತ ಬಸಯ್ಯ ಪೂಜಾರ ಅವರ ಕ್ಷೇತ್ರಗಳಲ್ಲಿ ಗುರುವಾರ ಜರುಗಿದ ಸುಧಾರಿತ ಮೇವಿನ ತಳಿಗಳ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಮಂತ್ರಿಗಳ ಆಶಯದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಹೈನುಗಾರಿಕೆ ಮಹತ್ವದ ಪಾತ್ರವಿದೆ. ವಿವಿಧ ರೀತಿಯ ಉತ್ತಮ ಗುಣಮಟ್ಟದ ಮೇವಿನ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದೆಂದು ರೈತರಿಗೆ ಸಲಹೆ ನೀಡಿದರು.
ಕೇಂದ್ರದ ಪಶು ವಿಜ್ಞಾನಿಯಾದ ಡಾ. ಮಹೇಶ ಕಡಗಿ ಮಾತನಾಡಿ, ಏಕದಳ ಮತ್ತು ದ್ವಿದಳ ಮೇವುಗಳನ್ನು ಜಾನುವಾರುಗಳಿಗೆ ಶೇ.75 ಮತ್ತು ಶೇ.25 ರಷ್ಟು ನೀಡುವುದರಿಂದ ಅವುಗಳ ಆರೋಗ್ಯ ಸುಧಾರಿಸುವುದರೊಂದಿಗೆ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ. ಬಹು ಕಟಾವಿನ ಮೇವಿನ ಜೋಳ(ಸಿ.ಒಎಫ್.ಎಸ್-31) ಇದು ಒಂದು ಮಳೆಯಾಶ್ರಿತ ಮೇವಿನ ಬೆಳೆಯಾಗಿದ್ದು, ಸುಮಾರು 4 ರಿಂದ 6 ವರ್ಷದ ವರೆಗೆ ಹಸಿರು ಮೇವಿನ ಇಳುವರಿ ಸುಮಾರು 110 ರಿಂದ 120 ಟನ್ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ನೀಡಬಲ್ಲದು. ಬೇಲಿ ಮೆಂತೆ ಇದು ದ್ವಿದಳ ಬಹುವಾರ್ಷಿಕ ಬೆಳೆಯಾಗಿದ್ದು, ವರ್ಷಕ್ಕೆ 60 ರಿಂದ 70 ಟನ್ ವರೆಗೆ ಇಳುವರಿ ನೀಡಬಲ್ಲದು ಎಂದು ಹೇಳಿದರು.
ರೈತರು ಮೇವಿನ ಬೆಳೆಗಳಿಂದ ಉತ್ತಮವಾದ ಬೀಜದ ಉತ್ಪಾದನೆಯನ್ನು ಮಾಡಿ ಇತರ ರೈತರಿಗೆ ನೀಡಬಹುದು. ಈ ಮೇವಿನ ಬೆಳೆಗಳ ಜೊತೆಗೆ ಮೇವಿನ ಚೊಗಚೆ ಮತ್ತು ನುಗ್ಗೆ ಮರಗಳನ್ನು ತಮ್ಮ ಹೊಲಗಳ ಬದುವಿನಲ್ಲಿ ಹಚ್ಚುವುದರಿಂದ ಉತ್ತಮವಾದ ಸಸಾರಜನಕಯುಕ್ತ ಮೇವನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.
ಕೇಂದ್ರದ ಕೀಟ ವಿಜ್ಞಾನಿ ಡಾ.ಕೆ.ಪಿ.ಗುಂಡಣ್ಣವರ ಮಾತನಾಡಿ, ಮೇವಿನ ಬೆಳೆಗಳಲ್ಲಿ ವಿವಿಧ ಸಸ್ಯ ಸಂರಕ್ಷಣಾ ವಿಧಾನಗಳನ್ನು ವಿವರಿಸುತ್ತಾ, ಸಿ.ಒಎಫ್.ಎಸ್ -31 ಮೇವಿನ ಬೆಳೆಯಲ್ಲಿ ಸಾಮಾನ್ಯವಾಗಿ ಈ ಸಮಯದಲ್ಲಿ ಕಂಡು ಬರುವ ಎಲೆ ಚುಕ್ಕೆ ರೋಗವನ್ನು ಹೆಕ್ಸಾಕ್ವಿನಾಜೋಲ್‌ಔಷಧವನ್ನು 1 ಮಿ. ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಮೇವು ಕಟಾವು ಆದ ನಂತರ ಸಿಂಪಡಿಸಬೇಕು. ಸಿಂಪರಣೆ ನಂತರ ಸುಮಾರು 20 ದಿನಗಳ ವರೆಗೆ ಮೇವನ್ನು ಜಾನುವಾರುಗಳಿಗೆ ತಿನ್ನಿಸಬಾರದು ಎಂದು ಸಲಹೆ ನೀಡಿದರು.
ಪ್ರಗತಿ ಪರ ರೈತ ಬಸಯ್ಯ ಪೂಜಾರ ಮಾತನಾಡಿ, ಈ ಸುಧಾರಿತ ಮೇವಿನ ತಳಿಗಳನ್ನು ಬಳಸುವುದರಿಂದ ವರ್ಷವಿಡಿ ಹಸಿರು ಮೇವನ್ನು ಪಡೆಯುವುದಲ್ಲದೇ ಹಸಿರು ಮೇವಿನ ಇಳುವರಿ ತುಂಬಾ ಹೆಚ್ಚಾಗಿ ಬರುತ್ತಿದೆ. ಮತ್ತು ಹಾಲಿನ ಇಳುವರಿ ಮತ್ತು ಗುಣಮಟ್ಟ ಹೆಚ್ಚಾಗಿರುವುದಲ್ಲದೆ ಜಾನುವಾರುಗಳ ಆರೋಗ್ಯದಲ್ಲಿ ತುಂಬಾ ಸುಧಾರಣೆಯಾಗಿದೆ ಎಂದರು.