ಚಿಕ್ಕೋಡಿ: ಗರ್ಭಿಣಿಯರು ಹಾಗೂ ಮಕ್ಕಳ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಸಿಡಿಪಿಒ ದೀಪಾ ಕಾಳೆ ಹೇಳಿದರು.
ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಪೋಷಣ ಪಕ್ವಾಡ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿದರೆ ಮಗು ಆರೋಗ್ಯವಾಗಿ ಇರುತ್ತದೆ. ಗರ್ಭಿಣಿಯರಲ್ಲಿ ರಕ್ತ ಹೀನತೆ ಹೋಗಲಾಡಿಸಲು ಹಸಿ ತರಕಾರಿ ಹೆಚ್ಚಾಗಿ ಉಪಯೋಗಿಸಬೇಕು ಎಂದರು.
ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಅಂಗನವಾಡಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅಂಗನವಾಡಿ ಮೇಲ್ವಿಚಾರಕರು-ಕಾರ್ಯಕರ್ತರು ಗ್ರಾಮದ ಜನರ ಜೊತೆ ಸೌಹಾರ್ದಯುತವಾಗಿ ಇರಬೇಕು ಎಂದರು.
ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಮಾತನಾಡಿ, ಗರ್ಭಿಣಿಯರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯ ದೊರಕುತ್ತಿದ್ದು, ಅವುಗಳ ಸದುಪಯೋಗ ಪಡೆದು ಆರೋಗ್ಯಯುತ ಮಕ್ಕಳ ಜನನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಅಂಗನವಾಡಿ ಮೇಲ್ವಿಚಾರಕಿ ಉಜ್ವಲಾ ಮಲಗೌಡರ ಮಾತನಾಡಿದರು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಕೆ. ಮುರಾರಿ, ಅಭಿವೃದ್ಧಿ ಅಧಿಕಾರಿ ಪ್ರಕಾಶ ಪಾಟೀಲ, ಡಿ.ಎನ್. ಬಸನಾಯಿಕ, ರಾಮಪ್ಪ ಈಟಿ, ಮಾರುತಿ ಚೌಗಲಾ, ಎನ್.ಎಸ್. ಕಲೆಗಾರ, ಜಯಶ್ರೀ ಮಮತಾಜ ಜಮಾದಾರ, ಸತ್ತೆವ್ವ ಕರನೂರೆ, ವೀಣಾ ಬೆಳಗಲಿ, ಶೋಭಾ ಬಾನೆ, ಲಗಮ್ಮವ್ವ ನೇರ್ಲಿ, ಸುಮಿತ್ರಾ ಚೌಗಲಾ, ಸುಜಾತಾ ಕೊಟಬಾಗಿ ಇತರರು ಇದ್ದರು.