Advertisement

“ಶಿಕ್ಷಣದ ಸಮಗ್ರತೆಗೆ ರಾಷ್ಟ್ರೀಯ, ರಾಜ್ಯ ಶಿಕ್ಷಾ ಆಯೋಗ ರಚನೆಗೆ ಸಲಹೆ’

11:46 PM Jun 11, 2019 | mahesh |

ಮಹಾನಗರ: ಭಾರತದ ಭವಿಷ್ಯದ ಅಗತ್ಯ, ಪರಂಪರೆಯನ್ನು ಸಾರುವ ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಶಿಕ್ಷಣ ನೀತಿಯ ಸಮಗ್ರ ಅನುಷ್ಠಾನಕ್ಕಾಗಿ ಕೇಂದ್ರದ ರಾಷ್ಟ್ರೀಯ ಶಿಕ್ಷಾ ಆಯೋಗ ಹಾಗೂ ರಾಜ್ಯದ ಶಿಕ್ಷಾ ಆಯೋಗ ರಚಿಸಲು ಸಲಹೆ ನೀಡಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಪ್ರೊ| ಎಂ.ಕೆ. ಶ್ರೀಧರ್‌ ಅಭಿಪ್ರಾಯಪಟ್ಟರು.

Advertisement

ಡಾ| ಕೆ. ಕಸ್ತೂರಿರಂಗನ್‌ ಸಮಿತಿಯು ಇತ್ತೀಚೆಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ “ರಾಷ್ಟ್ರೀಯ ಶಿಕ್ಷಣ ನೀತಿ’ಯ ಕರಡು ಸಲಹೆಗಳ ಕುರಿತಂತೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ರವಿವಾರ ಎಬಿವಿಪಿ ನೇತೃತ್ವದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಎರಡು ಬಾರಿ ಮಾತ್ರ ಶಿಕ್ಷಣ ನೀತಿ ಬಂದಿದ್ದು, ಇತ್ತೀಚಿನ 33 ವರ್ಷಗಳಲ್ಲಿ ಹೊಸ ಶಿಕ್ಷಣ ನೀತಿಯೇ ಬಂದಿರಲಿಲ್ಲ. ಅದಕ್ಕಾಗಿ ಹೊಸ ನೀತಿಯ ಕರಡನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಜೂ. 30ರ ವರೆಗೆ ಇದಕ್ಕೆ ಸಾರ್ವಜನಿಕರು ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ ಎಂದರು.

ಮಗುವಿಗೆ 6 ವರ್ಷ ಭರ್ತಿಯಾದಾಗ ಒಂದನೇ ತರಗತಿಗೆ ಸೇರಿಸುವ ಮೂಲಕ ಶಿಕ್ಷಣ ಆರಂಭವಾಗುತ್ತದೆ. ಆದರೆ, 1ರಿಂದ 3 ವರ್ಷವಾದಾಗಲೇ ಮಗುವಿನ ಮೆದುಳಿನಲ್ಲಿ ಬದಲಾವಣೆಯಾಗಲು ಆರಂಭವಾಗುತ್ತದೆ. ಸ್ವಂತಿಕೆ, ಸ್ವಾತಂತ್ರ್ಯ ನಿಲುವು ಸಾಧ್ಯವಾಗುತ್ತದೆ. ಹೀಗಾಗಿ ಅದೇ ಪ್ರಾಯದಲ್ಲಿ ಶಿಕ್ಷಣವೂ ದೊರೆತಾಗ ಮಗುವಿನ ಭವಿಷ್ಯ ಗಟ್ಟಿಯಾಗುತ್ತದೆ. ಮಗುವಿನ ಆಯಾ ವಯೋಮಾನಕ್ಕೆ ತಕ್ಕ ರೀತಿಯಲ್ಲಿ ಶಿಕ್ಷಣ ನೀಡಬೇಕು ಹಾಗೂ ಮಗುವಿಗೆ 3ರಿಂದ 8 ವರ್ಷದವರೆಗೆ ಸಾಂಪ್ರದಾಯಿಕ ಕಲಿಕೆ ಇರಕೂಡದು. ಪಠ್ಯ ಹಾಗೂ ಪಠ್ಯೇತರದ ಮಧ್ಯೆ ಯಾವುದೇ ವ್ಯತ್ಯಾಸ ಕೂಡ ಇರಬಾರದು ಎಂದು ಇತ್ತೀಚೆಗೆ ಕೇಂದ್ರಕ್ಕೆ ಸಲ್ಲಿಸಿದ ಕರಡಿನಲ್ಲಿ ತಿಳಿಸಲಾಗಿದೆ ಎಂದರು.

ಆಮೂಲಾಗ್ರ ಬದಲಾವಣೆ ಅಗತ್ಯ
ಪದವಿ ಶಿಕ್ಷಣದ ಬಗ್ಗೆ ನಾವು ಅಸಡ್ಡೆ ತೋರಿಸುತ್ತಲೇ ಬಂದಿದ್ದೇವೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿಗೆ ನಾವು ಸೀಮಿತ ಮಾಡಿದ್ದೇವೆ. ಪದವಿಯಲ್ಲಿ 1 ವಿಷಯದಲ್ಲಿ ಅನುತ್ತೀರ್ಣನಾದರೆ ಆತನ ಭವಿಷ್ಯವೇ ಸಮಸ್ಯೆಗೆ ಸಿಲುಕುತ್ತದೆ. ಹೀಗಾಗಿ ಪದವಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ ಎಂದರು.

ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಮುಖ್ಯ ಅತಿಥಿಯಾಗಿದ್ದರು. ಎಬಿವಿಪಿ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ಉಪಸ್ಥಿತರಿದ್ದರು. ಎಬಿವಿಪಿ ವಿಭಾಗ ಪ್ರಮುಖ ಕೇಶವ ಬಂಗೇರ ಸ್ವಾಗತಿಸಿ, ನಿರೂಪಿಸಿದರು.

Advertisement

ತ್ರಿಭಾಷಾ ಸೂತ್ರ; ಮಾಧ್ಯಮವಾಗಿ ಮಾತೃಭಾಷೆ
ಪ್ರೊ| ಎಂ.ಕೆ. ಶ್ರೀಧರ್‌ ಮಾತನಾಡಿ, “ಮಗುವಿಗೆ ಮೂರು ವರ್ಷವಿದ್ದಾಗಲೇ ತ್ರಿಭಾಷಾ ಸೂತ್ರವನ್ನು ಆರಂಭಿಸಿದರೆ, ಆ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸಿದಂತಾಗುತ್ತದೆ. ಮೂರಕ್ಕೆ ಮಾತ್ರ ಸೀಮಿತ ಮಾಡಬೇಡಿ; ಇನ್ನೂ ಹೆಚ್ಚಿಗೆ ಅವಕಾಶ ಕೊಡೋಣ ಎಂದು ಸಲಹೆ ನೀಡಲಾಗಿದೆ. ಹೆಚ್ಚು ಭಾಷೆ ಕಲಿತಷ್ಟು ವಿಕಾಸಗೊಳ್ಳಲು ಸಾಧ್ಯ. ಆದರೆ, ಮಾಧ್ಯಮವಾಗಿ ಮಾತೃಭಾಷೆಯೇ ಇರಬೇಕು ಹಾಗೂ ಅದರ ಆಧಾರದಲ್ಲಿಯೇ ನಡೆಯಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next