ಹುನಗುಂದ: ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಮತ್ತು ಉಚಿತ ಕಾನೂನು ನೆರವು ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಂಡು ತಮ್ಮ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ ಬಿ.ಮೋಹನಬಾಬು ಹೇಳಿದರು.
ವಿಶ್ವದಲ್ಲಿ ಮಾನವಕುಲವು ಸುಖದಿಂದ ಜೀವನ ಸಾಗಿಸಲು ಕಾರ್ಮಿಕರ ಶ್ರಮ ಶ್ಲಾಘನೀಯ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವಲಯವು ಯಾವುದೇ ಫಲಾಪೇಕ್ಷವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಅಂಥ ವರ್ಗವನ್ನು ಸಮಾಜದಲ್ಲಿ ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಕಾರ್ಮಿರ ಮೇಲೆ ಹಲ್ಲೆ, ಅನ್ಯಾಯವಾದಾಗ ತಾಲೂಕು ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ನೆರವು ಪಡೆದುಕೊಳ್ಳಬೇಕು. ಬಾಲ್ಯ ವಿವಾಹ ಮತ್ತು ಬಾಲ್ಯ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಿದ್ದು ಅದನ್ನು ಆಚರಿಸುವುದು ಕಾನೂನು ವಿರೋಧಿ ಚಟುವಟಿಕೆಯಾಗುತ್ತದೆ. ಅಸಂಘಟಿತ ಕಾರ್ಮಿಕರಿಗೆ ವಿಶೇಷವಾಗಿ ಜೀವ ವಿಮೆ ಮತ್ತು ಆನ್‌ಲೈನ್ ಮೂಲಕ ಕಾರ್ಮಿಕರು ನೋಂದಣಿ ಮಾಡಿದರೆ 60 ವರ್ಷದ ನಂತರ ಸರ್ಕಾರದ ಪಿಂಚಣಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಬರ್ಡ್ಸ್ ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಮಾತನಾಡಿ, ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳುವರ ವಿರುದ್ಧ ಸಂಘಟಿತ ಹೋರಾಟ ಮಾಡಿದ್ದರ ಫಲವಾಗಿ ಇಂದು ಕಾರ್ಮಿಕರ ಅನಿಯಮಿತ ಕೆಲಸದ ಅವಧಿ ಕೇವಲ 8 ಗಂಟೆಗೆ ಸೀಮಿತವಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಪದ್ಧತಿ ಜಾರಿಯಾಗಿದ್ದು ಉಚಿತ ಆರೋಗ್ಯ ಸೇವೆ, ರಜೆ, ಕಾರ್ಮಿರ ಕಲ್ಯಾಣ ನಿಧಿಯಿಂದ ಹಣಕಾಸಿನ ನೆರವು, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯ, ಹೆರಿಗೆ ಭತ್ಯೆ, ಪಿಂಚಣಿ ಸೌಲಭ್ಯ ಮತ್ತು ಆಕಸ್ಮಿಕವಾಗಿ ಕಾರ್ಮಿಕರು ನಿಧನ ಹೊಂದಿದಾಗ ಅವರ ಅವಲಂಬಿತ ಕುಟುಂಬಕ್ಕೆ 5 ಲಕ್ಷದವರೆಗೆ ಸಹಾಯ ಧನವನ್ನು ನೀಡುತ್ತಿದ್ದು ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಕಾರ್ಮಿಕರ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರ ನಿರಂತರ ಸೇವೆ ಪರಿಗಣಿಸಿ ಇನಾಂ ಕಡಿವಾಲ ಗ್ರಾಮದ ನಾಗಪ್ಪ ಮಲ್ಲಡದ, ಅಮರವಾಡಗಿಯ ಬಸಮ್ಮ ಮಾದರ, ಹುನಗುಂದದ ಸಂಗಪ್ಪ ವಿ.ಉಪ್ಪಿನ ಮತ್ತು ಬೀಬಿಜಾನ ನದಾಫ್ ಅವರನ್ನು ಬರ್ಡ್ಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.
Advertisement
ಪಟ್ಟಣದ ನಾಗಲಿಂಗ ನಗರದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿ, ಹುನಗುಂದ ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಹಾಗೂ ಬರ್ಡ್ಸ್ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement