ಮುದ್ದೇಬಿಹಾಳ: ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿದ್ಯಾರ್ಥಿಗಳ ಕ್ರೀಡಾಸಕ್ತಿಗೆ ಪೂರಕವಾಗಿ ಬಳಸಲು ಇರುವ ಶೇ. 2 ಅನುದಾನ ನಿಗದಿತ ಉದ್ದೇಶಕ್ಕೆ ಬಳಕೆ ಆಗಬೇಕು. ಈ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಪಿಡಿಒಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಸೂಚಿಸಿದರು.
ತಾಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆ ಮತ್ತು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ
ಅವರು, ತಾಲೂಕಿನ ಪ್ರತಿಯೊಂದು ಗ್ರಾಪಂ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಸಹಕಾರ ಕೊಡಬೇಕು. ಮಕ್ಕಳ ಕ್ರೀಡಾಸಕ್ತಿಗೆ ಪಂಚಾಯತ್ ಸಹಕಾರ ಕೊಡಬೇಕು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು ಕರಾಟೆ ಸೇರಿದಂತೆ ವಿದ್ಯಾರ್ಥಿನಿಯರ ಅಪೇಕ್ಷೆ ಪಡುವ ಕ್ರೀಡೆಗಳಿಗೆ ಗ್ರಾಪಂ ಪ್ರೋತ್ಸಾಹ ಕೊಡಬೇಕು ಎಂದರು.
ಕ್ರೀಡಾ ವಿಷಯವಾಗಿ ಬಳಕೆ ಮಾಡಿಕೊಳ್ಳಲು ಗ್ರಾಪಂಗಳಲ್ಲಿ ಶೇ. 2 ಅನುದಾನ ಮೀಸಲಿರಿಸಲಾಗಿರುತ್ತದೆ. ಆದರೆ ಬಹಳಷ್ಟು ಸಂದರ್ಭ ಈ ಅನುದಾನ ನಿಗದಿತ ಉದ್ದೇಶಕ್ಕೆ ಬಳಕೆಯಾಗಲ್ಲ. ಇನ್ನು ಮುಂದೆ ಎಲ್ಲ ಪಿಡಿಒಗಳು ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕ್ರೀಡೆಗೆ ಇರುವ ಅನುದಾನ ಅದಕ್ಕಾಗೇ ಬಳಸಿಕೊಳ್ಳಬೇಕು. ಗ್ರಾಪಂನ ವರ್ಗ-1ರಡಿ ಸಂಗ್ರಹವಾಗುವ ಅನುದಾನದಲ್ಲೇ ಬಳಕೆ ಮಾಡಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಬಸ್ ನಿಲ್ದಾಣ ಅವ್ಯವಸ್ಥೆಗೊಳಗಾಗಿದೆ. ನಾನು ಈ ಹಿಂದೆ ನಿಲ್ದಾಣ, ಘಟಕಕ್ಕೆ ಭೇಟಿ ಕೊಟ್ಟು ಪರಿಸ್ಥಿತಿ ಸುಧಾರಿಸುವಂತೆ ಸೂಚಿಸಿದ್ದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಮಂಜುನಾಥಗೌಡರು ಘಟಕ ವ್ಯವಸ್ಥಾಪಕ ಪಿ.ಕೆ. ಜಾಧವರನ್ನು ಪ್ರಶ್ನಿಸಿದರು. ನಮ್ಮ ಹಂತದಲ್ಲಿ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಹಂತದಲ್ಲಿ ಇಲ್ಲದ ಸಮಸ್ಯೆಗಳ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ಜಾಧವ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಇಲಾಖೆಗಳ ಕಾರ್ಯವೈಖರಿಗೆ ಕೆಲ
ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸ್ವತ್ಛಭಾರತ ಅಡಿ ವೈಯುಕ್ತಿಕ ಶೌಚಾಲಯ ಗುರಿ ತಲುಪಲು ಪಿಡಿಒಗಳಿಗೆ ನಿರ್ದೇಶನ ನೀಡಲು ತೀರ್ಮಾನಿಸಲಾಯಿತು. ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆ ಮಧ್ಯಾಹ್ನ 1ಕ್ಕೆ ಪ್ರಾರಂಭಗೊಂಡಿದ್ದರಿಂದ ಕೆಲ ಪ್ರಮುಖ ಇಲಾಖೆಗಳ ಮೇಲೆ ನಡೆಯಬೇಕಿದ್ದ ಗಂಭೀರ ಚರ್ಚೆಗೆ ಅವಕಾಶ ಸಿಗಲಿಲ್ಲ.
ಅಧ್ಯಕ್ಷೆ ಚನ್ನಮ್ಮ ತಂಗಡಗಿ ಅಧ್ಯಕ್ಷತೆ ವಹಿಸಿದ್ದರು. ಇಒ ಸುರೇಶ ಭಜಂತ್ರಿ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆ ಮುಖ್ಯಸ್ಥರು, ಪ್ರತಿನಿಧಿಗಳು, ತಾಪಂ ಸದಸ್ಯರು ಪಾಲ್ಗೊಂಡಿದ್ದರು.