ಶಹಾಪುರ: ರೈತ ದೇಶದ ಬೆನ್ನೆಲುಬು. ರೈತರಿಲ್ಲದೆ ನಾವ್ಯಾರು ಇಲ್ಲ ಪ್ರಸ್ತುತ ಕಾಲದಲ್ಲಿ ಸರ್ವರೂ ತಮ್ಮ ಮಕ್ಕಳನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಇಚ್ಚಿಸುತ್ತಾರೆ. ಆದರೆ ಮನೆಯಲ್ಲಿ ಮೂರು ಜನ ಮಕ್ಕಳಿದ್ದರೆ ಒಬ್ಬರನ್ನಾದರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ ಎಂದು ಮದ್ರಿಕಿ ಶಿವಯೋಗಿ ಶೀವಾಚಾರ್ಯರು ಸಲಹೆ ನೀಡಿದರು.
ಭೀಮರಾಯನ ಗುಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ನಡೆದ ರೈತರಿಂದ-ರೈತರಿಗಾಗಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಭೂಮಿ ತಾಯಿ ಯಾವತ್ತು ನಮ್ಮ ಕೈ ಬಿಡುವುದಿಲ್ಲ. ನಾವು ಸತ್ತಾಗ ಯಾರು ನಮ್ಮನ್ನು ಮನೆಯಲ್ಲಿ ಇಟ್ಟು ಕೊಳ್ಳುವುದಿಲ್ಲ. ಆದರೆ ಭೂಮಿ ತಾಯಿ ತನ್ನ ಮಡಿಲಲ್ಲಿಟ್ಟುಕೊಳ್ಳುವಳು. ರೈತರನ್ನು ಸಲಹುವ ತಾಯಿ ಎಂದಿಗೂ ಮೋಸ ಮಾಡುವದಿಲ್ಲ. ಆದರೆ ನಮ್ಮ ಶ್ರಮ ಅದರಲ್ಲಿ ಪ್ರಾಮಾಣಿಕವಾಗಿ ಅಡಗಿರಬೇಕು. ಅಲ್ಲದೆ ಇತ್ತೀಚೆಗೆ ನಾವು ಹೆಚ್ಚು ಇಳುವರಿ ಬರಲಿ ಎಂಬ ಕಾರಣಕ್ಕೆ ರಾಸಾಯನಿಕ ಗೊಬ್ಬರ ಬಳಸುವ ಮೂಲಕ ಭೂಮಿಯನ್ನು ರೋಗಗ್ರಸ್ತವನ್ನಾಗಿ ಮಾಡಿದ್ದೇವೆ. ಬೆಳೆ ಇಳುವರಿಗೆ ರಾಸಾಯನಿ ಬಳಕೆ ಕಡಿಮೆ ಮಾಡಬೇಕು. ಸಾವಯವ ಗೊಬ್ಬರ ಬಳಕೆ ಹೆಚ್ಚು ಮಾಡುವ ಮೂಲಕ ಉತ್ತಮ ಆಹಾರ ಬೆಳೆಯುವಲ್ಲಿ ಮನಸ್ಸು ಮಾಡಬೇಕು. ಮತ್ತು ಗೋವು ಸಂರಕ್ಷಣೆ ಬಹು ಮುಖ್ಯವಿದೆ. ಗೋಮಾತೆ ರಕ್ಷಿಸಿಕೊಳ್ಳಬೇಕಿದೆ. ಗೋವು ಯಾರ ಮನೆಯಲ್ಲಿ ಇರಲಿದೆ. ಆ ಮನೆ ಯಾವುದೇ ಊಟಕ್ಕೆ ಬಟ್ಟೆಗೆ ನೆಮ್ಮದಿಗೆ ಕಡಿಮೆ ಇಲ್ಲದಂತೆ ಸಮೃದ್ಧವಾಗಿ ಇರಲಿದೆ ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ| ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಹಾವಿದ್ಯಾಲಯ ಉಸ್ತುವಾರಿ ಡೀನ್ ಡಾ| ಪಿ. ಕುಚನೂರ. ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಲ್ಲಿಕಾರ್ಜುನ ಕೆಂಗನಾಳ ಇದ್ದರು. ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.