Advertisement

ಸಾಲಿಗ್ರಾಮ ತಾಲೂಕು ರಚನೆಗೆ ಸಲಹೆ ನೀಡಿ

09:14 PM Oct 13, 2019 | Lakshmi GovindaRaju |

ಕೆ.ಆರ್‌.ನಗರ: ಕೆ.ಆರ್‌.ನಗರ ತಾಲೂಕನ್ನು ವಿಭಾಗ ಮಾಡಿ ಸಾಲಿಗ್ರಾಮವನ್ನು ಹೊಸ ತಾಲೂಕು ಕೇಂದ್ರವನ್ನಾಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೊಸ ವರ್ಷದ ಆರಂಭದಲ್ಲಿ ಹೊಸ ತಾಲೂಕು ರಚನೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧದ ಕಚೇರಿಯಲ್ಲಿ ಹೊಸ ತಾಲೂಕು ರಚನೆ ಸಂಬಂಧ ಭಾನುವಾರ ನಡೆದ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಸಲಹೆ ನೀಡಿ: ತಾಲೂಕು ರಚನೆ ಸಂಬಂಧ ಯಾವುದೇ ರೀತಿಯ ಆಕ್ಷೇಪಣೆ ಮತ್ತು ಸಲಹೆ ಸೂಚನೆಗಳಿದ್ದಲ್ಲಿ ಸಾರ್ವಜನಿಕರು ಲಿಖೀತವಾಗಿ ತಹಶೀಲ್ದಾರ್‌ರರಿಗೆ ಅಥವಾ ನನಗೆ ನೀಡಬೇಕು ಎಂದು ಮನವಿ ಮಾಡಿದ ಶಾಸಕರು, ಇಂದಿನ ಸಭೆಯಲ್ಲಿ ನಡೆದ ಎಲ್ಲಾ ವಿಚಾರಗಳು ಮತ್ತು ಈವರೆಗೆ ಆಗಿರುವ ಆಡಳಿತಾತ್ಮಕ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದು ಅವರ ಸಲಹೆಯನ್ನು ಪಡೆಯಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಲಿಗ್ರಾಮವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಿ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗಾಗಿ ಕೆ.ಆರ್‌.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಜನತೆಯ ಪರವಾಗಿ ನಾನು ಹಿಂದಿನ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

3 ಹೋಬಳಿ ಸೇರ್ಪಡೆ: ಸಭೆಗೆ ಮಾಹಿತಿ ನೀಡಿದ ಕಾರ್ಯನಿರ್ವಾಹಕ ಶಿರಸ್ತೇದಾರ್‌ ಷಣ್ಮುಖ, ಆರು ಹೋಬಳಿಗಳ ಪೈಕಿ ಮೂರು ಕೆ.ಆರ್‌.ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಗೆ ತಲಾ ಮೂರು ಹೋಬಳಿಗಳು ಸೇರ್ಪಡೆಯಾಲಿದ್ದು, ಅಂತೆಯೇ ಆರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಪ್ರತಿ ತಾಲೂಕಿಗೆ ಮೂರು ಜಿಪ. ಕ್ಷೇತ್ರಗಳು ಸೇರಲಿದ್ದು, ಕೆ.ಆರ್‌.ನಗರ ತಾಲೂಕಿಗೆ 87 ಗ್ರಾಮಗಳು, ಸಾಲಿಗ್ರಾಮ ತಾಲೂಕಿಗೆ 92 ಗ್ರಾಮಗಳು ಒಳಪಡಲಿವೆ ಎಂದು ತಿಳಿಸಿದರು.

Advertisement

ಜನಸಂಖ್ಯೆ: ಕೆ.ಆರ್‌.ನಗರ ತಾಲೂಕಿಗೆ 1,02,258 ಮಂದಿ ಜನಸಂಖ್ಯೆ ಮತ್ತು 1.09,539 ಮಂದಿ ಮತದಾರರು ಇರಲಿದ್ದು, ಸಾಲಿಗ್ರಾಮ ತಾಲೂಕಿಗೆ 1,29,693 ಮಂದಿ ಜನರು ಹಾಗೂ 96,675 ಮಂದಿ ಮತದಾರರು ಸೇರಲಿದ್ದಾರೆ ಎಂದರು.

ಆಡಳಿತಾತ್ಮಕ ನಿರ್ಧಾರ: ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್‌ ಮಾತನಾಡಿ, ತಾಲೂಕಿನ ಜನತೆಯ ಹಿತದೃಷ್ಟಿಯಿಂದ ಎರಡು ತಾಲೂಕುಗಳನ್ನಾಗಿ ಮಾಡಿರುವ ಸರ್ಕಾರದ ತೀರ್ಮಾನಕ್ಕೆ ನಮ್ಮ ಸಹಮತವಿದ್ದು ಅಧಿಕಾರಿಗಳು ಜನರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಎಂ.ಮಂಜುಳಾ, ಎಪಿಎಂಸಿ ಅಧ್ಯಕ್ಷ ಕುಪ್ಪಹಳ್ಳಿ ಸೋಮು, ಮೈಮುಲ್‌ ಮಾಜಿ ಅಧ್ಯಕ್ಷ ಸೋಮಶೇಖರ್‌, ತಾಪಂ ಸದಸ್ಯ ಶ್ರೀನಿವಾಸಪ್ರಸಾದ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್‌.ಡಿ.ಗಿರೀಶ್‌, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್‌.ಯದುಗಿರೀಶ್‌, ವೃತ್ತ ನಿರೀಕ್ಷಕ ಪಿ.ಕೆ.ರಾಜು, ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಅರ್ಕೇಶ್‌ಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

ಯಾವ ಯಾವ ಗ್ರಾಮಗಳು ಯಾವ ತಾಲೂಕಿಗೆ ಸೇರ್ಪಡೆ: ಆಡಳಿತದ ಹಿತದೃಷ್ಟಿಯಿಂದ ಈಗ ಸಾಲಿಗ್ರಾಮ ತಾಲೂಕಿಗೆ ಸೇರ್ಪಡೆ ಮಾಡಲು ನಿರ್ಧರಿಸಿರುವ ಚುಂಚನಕಟ್ಟೆ ಹೋಬಳಿಯ ಕೆಸ್ತೂರುಕೊಪ್ಪಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳನ್ನು ಕೆ.ಆರ್‌.ನಗರ ತಾಲೂಕಿಗೆ ಮತ್ತು ಕೆ.ಆರ್‌.ನಗರದ ವ್ಯಾಪ್ತಿಗೆ ಬರಲಿರುವ ಹೊಸಅಗ್ರಹಾರ ಹೋಬಳಿಯ ಭೇರ್ಯ ಮತ್ತು ಮುಂಜನಹಳ್ಳಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮಗಳನ್ನು ಸಾಲಿಗ್ರಾಮ ತಾಲೂಕಿಗೆ ಸೇರಿಸಲಾಗುತ್ತದೆ ಎಂದು ಶಾಸಕ ಸಾ.ರಾ.ಮಹೇಶ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next