ಇಂಡಿ: ತಾಲೂಕಿನ ಕೇಂದ್ರ ಸ್ಥಾನದಲ್ಲಿ ಮಂಜೂರಾಗಿರುವ ನಿಂಬೆ ಅಭಿವೃದ್ಧಿ ಮಂಡಳಿ ತನ್ನ ಕಾರ್ಯವನ್ನು ವಿಸ್ತರಿಸಿ
ಸಂಶೋಧನೆ, ವಿಚಾರ ಸಂಕಿರಣ, ದೇಶಿ ನಿಂಬೆ ತಳಿ ಉತ್ಪಾದನೆ, ಮಾರುಕಟ್ಟೆ, ನಿಂಬೆಯಿಂದ ತಯಾರಾಗುವ ನೂತನ ಉತ್ಮನ್ನ ಅವಿಷ್ಕರಿಸಿ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬ್ರೆಝಿಲ್, ಮಾರಿಶಸ್ ದೇಶಗಳಲ್ಲಿಗಿಂತಲೂ ನಮ್ಮ ಭಾಗದ ಕಬ್ಬು 13.5 ರಿಕವರಿ ನೀಡುತ್ತದೆ. ಈ ಕುರಿತು ರೈತರಿಗೆ ಸೂಕ್ತ ಮಾರ್ಗದರ್ಶನವನ್ನು ಅಧಿಕಾರಿಗಳು ಮಾಡಬೇಕು. ಆಧುನಿಕ ಆಹಾರ ಪದ್ಧತಿಯಿಂದ ನಗರ
ವಾಸಿಗಳು ಮತ್ತೆ ಹಿಂದಿನ ಆಹಾರ ಪದ್ಧತಿಗೆ ದಾಸರಾಗುತ್ತಿದ್ದಾರೆ. ಅದಕ್ಕಾಗಿ ರೈತರಿಗೆ ಸಿರಿಧಾನ್ಯ ಬೆಳೆಯಲು ಸಲಹೆ ನೀಡಬೇಕು ಎಂದರು.
ಕೃಷಿ ವಿಜ್ಞಾನ ಕೆಂದ್ರದ ಮೂಲಕ ರೈತರಿಗೆ ಸೂಕ್ತ ತರಬೇತಿ ನೀಡಿ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದ ಅವರು, ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಅನುಷ್ಠಾನವನ್ನು ಅಧಿಕಾರಿಗಳು ಸಮರೋಪಾದಿಯಲ್ಲಿ ಮಾಡಬೇಕೆಂದರು.
ರಾಷ್ಟ್ರೀಯ ಹಬ್ಬಗಳನ್ನು ಕಾಟಾಚಾರಕ್ಕಾಗಿ ಮಾಡದೆ ನಮ್ಮ ಹಿರಿಯರ ಶ್ರಮಕ್ಕೆ- ತ್ಯಾಗಕ್ಕೆ ಗೌರವ ನೀಡುವ ಕಾರ್ಯವಾಗಬೇಕು. ದೇಶದ ಐಕ್ಯತೆ ಸಾರುವ ಬಹುಮತ್ವ ಕಾಪಾಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಡಾ| ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಿ ರಾಷ್ಟ್ರೀಯ ಭಾವೈಕ್ಯತೆ ಮೆರೆಯಬೇಕು. ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಕಾರ್ಯ ಸಾಧನೆ ಮಾಡಿರುವವರನ್ನು ಸನ್ಮಾನ ಮಾಡಬೇಕು ಎಂದರು.
ಬೂದಿಹಾಳ ಕೂಡು ರಸ್ತೆ ಕಾರ್ಯವನ್ನು ಕೂಡಲೆ ಆರಂಭಿಸಬೇಕು. ಪುರಸಭೆಯವರು ರಸ್ತೆಗಳನ್ನು ಸುಧಾರಿಸುವ ಕೆಲಸ ಮಾಡಬೇಕು. ಇಂಡಿ ನಗರದ ಕೆರೆಗಳಾದ ಸೈಟ್ ನಂಬರ್ 1 ಮತ್ತು 2ರ ನೀರು ನಿರ್ವಹಣೆ ಸಮರ್ಪಕವಾಗಿ ಮಾಡಬೇಕೆಂದು ತಿಳಿಸಿದ ಅವರು, ಸಸಿಗಳನ್ನು ನೆಡುವುದಷ್ಟೇ ಇಲಾಖೆ ಕೆಲಸವಲ್ಲ. ಅದರ ನಿರ್ವಹಣೆಯೂ ಮಾಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದಲ್ಲಿ ಶೌಚಾಲಯ ಸಮಸ್ಯೆಯಾಗದಂತೆ ಪುರಸಭೆಯವರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ತಾಪಂ ಇಒ ರಾಜಕುಮಾರ ತೊರವಿ ಇದ್ದರು. ಸಭೆಯಲ್ಲಿ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕಾ ಅಧಿಕಾರಿ ಎಚ್.ಎಸ್. ಪಾಟೀಲ, ಸಿಡಿಪಿಒ ಗೋವರ್ಧನ, ಮುಖ್ಯಾಧಿಕಾರಿ ನಾಯಕ್ ಸೇರಿದಂತೆ
ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.