ಬೆಳಗಾವಿ: ಕೋವಿಡ್-19 ಪತ್ತೆ ಮತ್ತು ನಿಯಂತ್ರಣ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳಿಗಾಗಿ ಸ್ಥಾಪಿಸಲಾಗಿರುವ ಕೋವಿಡ್-19 ವಾರ್ ರೂಮ್‌ನಲ್ಲಿರುವ ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನವನ್ನು ಕೋವಿಡ್-19 ನಿಯಂತ್ರಣಕ್ಕೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ವಿಶ್ವೇಶ್ವರಯ್ಯ ನಗರದ ಸ್ಮಾರ್ಟ್ ಸಿಟಿಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್-19 ವಾರ್ ರೂಮ್‌ಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19 ವೈರಸ್ ಸೋಂಕು ಪತ್ತೆ ಹಾಗೂ ಸಂಪರ್ಕಿತರ ಮೇಲೆ ನಿಗಾ ವಹಿಸಲು ಇದರ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು.
ವಾರ್ ರೂಮ್ ಕಾರ್ಯ ಸ್ವರೂಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ವಾರ್ ರೂಮ್ ತಂತ್ರಜ್ಞಾನದಿಂದ ಸರ್ಕಾರದ ಮಾರ್ಗಸೂಚಿಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರು.
ವಾರ್ ರೂಮ್ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಕೋವಿಡ್-19 ನಿಯಂತ್ರಣಾ ಕ್ರಮಗಳ ಉಸ್ತುವಾರಿಯಾಗಿರುವ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಕೋವಿಡ್-19 ನಿಯಂತ್ರಣ, ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ, ಜನರು ಮತ್ತು ವಾಹನ ಸಂಚಾರದ ಮೇಲೆ ವಾರ್ ರೂಮ್ ಮೂಲಕ ನಿಗಾ ವಹಿಸಲಾಗುತ್ತದೆ ಎಂದು ವಿವರಿಸಿದರು.
ಮೊಬೈಲ್ ಆ್ಯಪ್, ವಿಡಿಯೋ ಫುಷ್ ಮತ್ತು ಸರ್ವೇಲನ್ಸ್, ಕಸ್ಪೈಸ್ಡ್ ಡ್ಯಾಶ್ ಬೋರ್ಡ್, ಸೋಂಕಿತರ ಜತೆ ಸಂಪರ್ಕಕ್ಕೆ ಬಂದವರನ್ನು ಮೊಬೈಲ್ ಸಂಖ್ಯೆ ಮೂಲಕ ಪತ್ತೆ ಹಚ್ಚುವಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಮತ್ತು ಅನಿಸಿಕೆ ಸಂಗ್ರಹಿಸುವ ಮೂಲಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಇದನ್ನು ಬಳಸಲಾಗುತ್ತದೆ ಎಂದರು. ಶೀಘ್ರದಲ್ಲೇ ಕ್ವಾರಂಟೈನ್ ಕೇಂದ್ರಗಳು, ಕಂಟೈನ್ಮೆಂಟ್ ಝೋನ್ ಮತ್ತಿತರ ಕಡೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ಸಹ ಈ ವಾರ್ ರೂಮ್‌ಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಕಂಟೈನ್ಮೆಂಟ್ ಝೋನ್‌ಗಳಲ್ಲಿ ಜನರು ದಿನಸಿ, ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಪಡೆಯಲು ಹೊರಗಡೆ ಬರದೇ ವಿಶೇಷ ಆ್ಯಪ್ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಮಾಹಿತಿ ನೀಡಿದರು.
ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದರಿಂದ ದಿನಸಿ, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕು. ಕುಡಚಿ, ಹಿರೇಬಾಗೇವಾಡಿ, ಸಂಕೇಶ್ವರದಲ್ಲಿ ಡ್ರೋಣ್ ಕ್ಯಾಮೆರಾ ಮೂಲಕ ನಿಗಾ ವಹಿಸಬೇಕೆಂದು ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದರು. ಸಚಿವ ಸುರೇಶ್ ಅಂಗಡಿ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ., ಐಜಿಪಿ ರಾಘವೇಂದ್ರ ಸುಹಾಸ್, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.