ಬೆಂಗಳೂರು: ಮಹಾನಗರ ವ್ಯಾಪ್ತಿಯ ಎಲ್ಲ ಸೇವಾ ಸಂಸ್ಥೆಗಳ ನಡುವೆ ಸಮನ್ವಯತೆ ಮೂಡಿಸಲು ಮೆಟ್ರೋಪಾಲಿಟನ್ ಕಮಿಷನರ್‌ರನ್ನು ನೇಮಿಸುವ ಅಗತ್ಯವಿದೆ ಎಂದು ಸಂಘ ಸಂಸ್ಥೆಗಳು ಸಲಹೆ ನೀಡಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿ ಕುರಿತಂತೆ ನಾನಾ ಇಲಾಖೆಗಳ ಮುಖ್ಯಸ್ಥರು ಹಾಗೂ ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ, ಬಿಡಿಎ, ಜಲ ಮಂಡಳಿ, ಬಿಎಂಆರ್‌ಸಿಎಲ್, ಬೆಸ್ಕಾಂ ಎಲ್ಲವೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ನಗರದ ಅಭಿವೃದ್ಧಿಯಲ್ಲಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ.
ಹೀಗಾಗಿ, ಮೆಟೋಪಾಲಿಟನ್ ಕಮೀಷನರ್ ಅಗತ್ಯತೆ ಬಗ್ಗೆ ಸಲಹೆ ಬಂದಿದೆ, ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿರುವುದರಿಂದ ಎಲ್ಲ ಇಲಾಖೆಗಳ ನಡುವೆ ಹೊಂದಾಣಿಕೆ ಅಗತ್ಯವಿದೆ. ಮೆಟ್ರೋ ಯೋಜನೆ ಕೇವಲ 42 ಕಿ.ಮೀ. ಮಾಡಲಾಗಿದೆ. 250 ಕಿ.ಮೀ. ಗುರಿ ಇಟ್ಟುಕೊಳ್ಳಬೇಕು. ಸಬ್ ಅರ್ಬನ್ ರೈಲು ಯೋಜನೆ ತ್ವರಿತಗೊಳಿಸುವುದು.
ಫೆರಿಪೆರೆಲ್ ರಿಂಗ್ ರಸ್ತೆ ಯೋಜನೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕೆಂಬ ಸಲಹೆ ಬಂದಿದೆ. ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಾಸ್ಟರ್ ಪ್ಲ್ರಾನ್ ಮಾಡಲಾಗುತ್ತಿದೆ. ಅದು ಸರ್ಕಾರದ ಹಂತದಲ್ಲಿ ಇನ್ನೂ ಚರ್ಚೆಯಲ್ಲಿರುವುದರಿಂದ ಬದಲಾವಣೆಗೆ ಅವಕಾಶವಿದೆ ಎಂದು ಹೇಳಿದರು. ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತ ವಿಕೇಂದ್ರಿಕರಣ ಮಾಡುವಂತೆಯೂ ಸಲಹೆ ಬಂದಿದೆ. ಈ ಬಗ್ಗೆ ನಾಗರಿಕರ ಅಭಿವೃದ್ಧಿ ಸಂಘಗಳು, ಅಪಾರ್ಟ್‌ಮೆಂಟ್ ಸಂಘಗಳು ಹಾಗೂ ಐಟಿ ಬಿಟಿ ಸಂಸ್ಥೆಗಳೊಂದಿಗೂ ಸಭೆ ನಡೆಸಿ, ಅವರ ಸಲಹೆಗಳನ್ನೂ ಪಡೆದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
ಎಲ್ಲ ಯೋಜನೆಗಳಿಗೂ ಭೂ ಸ್ವಾಧೀನ ಸಾಮಾನ್ಯ ಸಮಸ್ಯೆಯಾಗಿರುವುದರಿಂದ ಈ ಬಗ್ಗೆಯೂ ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಬಿಡಿಎ, ಬಿಬಿಎಂಪಿ ಆಯುಕ್ತರು, ಜಲ ಮಂಡಳಿ ಅಧ್ಯಕ್ಷರು, ಬೆಸ್ಕಾಂ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹಾಗೂ ಉದ್ಯಮಿ ಮೋಹನ್‌ದಾಸ್ ಪೈ ಹಾಜರಿದ್ದರು.