ಶಹಾಬಾದ: ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ಜಾರಿಯಾಗಿರುವ ಮಾತೃಪೂರ್ಣ ಯೋಜನೆಯನ್ನು ಗರ್ಭಿಣಿಯರು ಹಾಗೂ ಬಾಣಂತಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಬಸವೇಶ್ವರ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಾತೃಪೂರ್ಣ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಸಿಯೂಟದ ಜತೆಗೆ ಪೌಷ್ಟಿಕ ಆಹಾರ ನೀಡುವುದರ ಮೂಲಕ ರಕ್ತ ಹೀನತೆ ತಡೆಗಟ್ಟುವುದೇ ಯೋಜನೆ ಮೂಲ ಉದ್ದೇಶವಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರ ರಕ್ಷಣೆಗಾಗಿ ಇಲಾಖೆ ಜಾರಿಗೆ ತಂದಿರುವ ಕಾರ್ಯಕ್ರಮ ಸರಿಯಾದ ರೀತಿಯಲ್ಲಿ ನಡೆಯಲಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಣ್ಣ ದೇಸಾಯಿ ಮಾತನಾಡಿ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಇಂತಹ ತೊಂದರೆ ಹೋಗಲಾಡಿಸಲು ಸರಕಾರ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ, ಮಲ್ಲಿಕಾರ್ಜುನ ಪೂಜಾರಿ,ನಾಮದೇವ ಚವ್ಹಾಣ, ನಾಗೇಂದ್ರ ನಾಟೇಕಾರ, ಮಲ್ಲಣ್ಣ ಸಣಮೋ, ಮಲ್ಲಿಕಾರ್ಜುನ ಜಲಧರ್, ಶೇರಲಿ, ಸೂರ್ಯಕಾಂತ ಕೋಬಾಳ, ಮೇಲ್ವಿಚಾರಕಿ ಶಕುಂತಲಾ ಸಾಕರೆ, ಮೀನಾಕ್ಷಿ, ನೇತ್ರಾವತಿ, ಲಕ್ಷ್ಮೀಇಂದಿರಾ, ಸರೆನಾ, ಸುನೀತಾ, ನಾಗಮ್ಮ, ಜಗನ್ನಾಥ ರೆಡ್ಡಿ, ಸಾಯಿಬಣ್ಣ ಪೂಜಾರಿ ಇದ್ದರು.