Advertisement

ಹತ್ತನೇ ತರಗತಿಯಲ್ಲಿ ನೀನೂ ಉತ್ತೀರ್ಣನಾಗಬಹುದು! 

11:47 PM Mar 19, 2022 | Team Udayavani |

ಆತ ಹಳ್ಳಿ ಹುಡುಗ. ಆತನ ಹೆಸರು ರವೀಶ. ಪೋಷಕರು ಅಷ್ಟು ವಿದ್ಯಾವಂತರಲ್ಲ. ಮಗ ಶಾಲೆಗೆ ಹೋದರೆ ಹೋದ. ಕೆಲವೊಮ್ಮೆ ಮನೆಯಲ್ಲೇ ಕುಳಿತಿರುವುದೂ ಇದೆ. ಆತನ ಶಿಕ್ಷಕರು ಬೆನ್ನುಬಿಡದೆ ಎಸೆಸೆಲ್ಸಿ ಸಿದ್ಧತಾ ಪರೀಕ್ಷೆಗೆ ಶಾಲೆಗೆ ಬರುವಂತೆ ಮಾಡಿದರು. ಆತನಿಗೆ ಎಂದಿನಂತೆ ಒಂದಂಕಿಯ ಅಂಕಗಳೇ ಬಂದವು. ಮತ್ತೆ ಆತನಿಗೆ, ಶಿಕ್ಷಕರಿಗೆ, ಪೋಷಕರಿಗೆ ನಿರಾಶೆ.

Advertisement

ಹಾಗೆಂದು ಆತ ಅಂಕ ಗಳಿಕೆಯಲ್ಲಿ ಹಿಂದಿದ್ದರೂ ಅವನಲ್ಲಿ ಬದುಕಿನ ಶಿಕ್ಷಣ ಚೆನ್ನಾಗಿತ್ತು. ಆತನ ಗಣಿತ ಶಿಕ್ಷಕರು ಒಂದು ದಿನ ತರಗತಿಯಲ್ಲಿ ಪರೀಕ್ಷಾ ತಯಾರಿ ಹೇಗಿರಬೇಕು? ಒಂದಂಕಿ ಪಡೆದವರೂ ಪಾಸಾಗಲು ಸಾಧ್ಯವಿದೆ ಎಂದು ಹೇಳುತ್ತಾ ಇತ್ತೀಚೆಗೆ ನಡೆದ ಒಂದು ನೈಜ ಘಟನೆಯನ್ನು ಮಕ್ಕಳಿಗೆ ತಿಳಿಸಿದರು. ಅದು ಹೀಗಿತ್ತು- ಅವನೊಬ್ಬ ಎರಡೂ ಕೈಗಳಿಲ್ಲದ ವಿದ್ಯಾರ್ಥಿ. ಕೈಗಳೆರಡರಲ್ಲೂ ಬರೆಯುವ ಸಾಧ್ಯತೆಗಳೇ ಇಲ್ಲ.ಯೋಚಿಸುತ್ತಾನೆ, ನಾನೇಕೆ ಕಾಲೆºರಳುಗಳ ಸಹಾಯದಿಂದ ಬರೆಯಬಾರದೆಂದು ಅಭ್ಯಾಸ ಶುರುಮಾಡಿದ. ಬರೆದು ಬರೆದು ಸಲೀಸಾಗಿ ಬರೆಯುವಂತಾದ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.70 ಅಂಕಗಳನ್ನು ಪಡೆದ. ನಮಗೆ ಎಷ್ಟೊಂದು ಉಪಯುಕ್ತವಾದ ಕಣ್ಣು, ಕೈಕಾಲು ಮುಂತಾದ ಅಂಗಾಂಗಗಳನ್ನು ದೇವರು ಕೊಟ್ಟಿದ್ದಾನೆ. ನಾವೇಕೆ ಆ ಕೈಗಳಿಂದ ಬರೆದು ಪಾಸಾಗಲು ಸಾಧ್ಯವಿಲ್ಲವೆಂದು ಕತೆ ಮುಗಿಸುತ್ತಿದ್ದಂತೆ ರವೀಶನ ಕಣ್ಣಲ್ಲಿ ನೀರು ಜಿನುಗಲಾರಂಭಿಸಿತು.

ಶಿಕ್ಷಕರು ಹೇಳಿದ ಕತೆ ಅವನ ಮೇಲೆ ಪ್ರಭಾವ ಬೀರಿತ್ತು. ಕೈಗಳಿಲ್ಲದ ಹುಡುಗ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಯಾಗಲು ಸಾಧ್ಯವಾಗಬಹುದಾದರೆ ನಾನೇಕೆ ಉತ್ತೀರ್ಣನಾಗಲಾರೆ ಎಂಬ ಪ್ರಶ್ನೆ ಆತನನ್ನು ಕಾಡತೊಡಗಿತು. ಇದ್ದಕ್ಕಿದ್ದಂತೆ ರವೀಶನಿಗೆ ಓದಿನತ್ತ ಚಿತ್ತ ಹರಿಯಿತು. ಪರೀಕ್ಷೆಗಾಗಿ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಕೊಂಡ. ಮನವಿಟ್ಟು ಓದತೊಡಗಿದ. ಎಲ್ಲ ಶಿಕ್ಷಕರು, ಆತನ ಸಹಪಾಠಿಗಳು ಅವನಲ್ಲಿ ಅಪಾರ ಬದಲಾವಣೆ ಕಂಡರು. ಪರೀಕ್ಷಾ ಫ‌ಲಿತಾಂಶ ಬರುತ್ತಿದ್ದಂತೆ ಅರುವತ್ತು ಪ್ರತಿಶತ ಅಂಕಗಳನ್ನು ಪಡೆದಿದ್ದ. ಎಲ್ಲರಿಗೂ ಅಚ್ಚರಿ. ಇದು ಗಣಿತ ಶಿಕ್ಷಕರು ಹೇಳಿದ ಕತೆಯ ಪರಿಣಾಮವೋ ಅಥವಾ ರವೀಶನಲ್ಲಾದ ಬದಲಾವಣೆಯ ಪರಿಣಾಮವೋ. ಎಲ್ಲರಿಂದಲೂ ಶತದಡ್ಡ ಎಂದು ಕರೆಸಿಕೊಳ್ಳುತ್ತಿದ್ದ ಕೊನೇ ಕ್ಷಣದಲ್ಲಿ ದೃಢಚಿತ್ತದಿಂದ ಓದಿ ಎಸೆಸೆಲ್ಸಿ ತೇರ್ಗಡೆಯಾದ. ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ರವೀಶನಂತೆ ಸಿದ್ಧತೆ ಮಾಡದಿರುವ ಮಕ್ಕಳು ಮನವಿಟ್ಟು ಪ್ರಯತ್ನಿಸಿದರೆ ಯಶಸ್ಸು ಪಡೆಯಲು ನಿಮಗೂ ಸಾಧ್ಯವಿದೆ. ಹತ್ತನೇ ತರಗತಿ ಇಂದಿನ ದಿನಮಾನಗಳಲ್ಲಿ ಅತೀ ಅಗತ್ಯವಾಗಿ ಪಾಸಾಗಬೇಕಾದ ಕನಿಷ್ಠ ತರಗತಿ. ವಿದ್ಯಾರ್ಥಿಗಳೇ ನಾನು ನಾಳೆಯೋ ಅಥವಾ ಮುಂದೆ ಯಾವಾಗಲೋ ಎಸೆಸೆಲ್ಸಿ ತೇರ್ಗಡೆ ಯಾಗಬಲ್ಲೆ ಎಂದರೆ ಸಾಧ್ಯವಿಲ್ಲ. ನಿಮ್ಮ ಸಹಪಾಠಿಗಳನೇಕರು ಸಾಧಿಸುವ ಪಣತೊಟ್ಟಿ ದ್ದಾರೆ. ಪ್ರತಿಯೊಬ್ಬರೂ ಅವರೊಂದಿಗೆ ಮುನ್ನುಗ್ಗಿ, ಗುರುಗಳು ನೀಡುವ ಮಾರ್ಗದರ್ಶನದಂತೆ ಮುನ್ನಡೆಯಿರಿ. ಗೆಳೆಯರ ಜತೆ ಸೇರಿಕೊಂಡು ಕಲಿಕೆಗೆ ಪ್ರಯತ್ನಿಸಿ. ಒಂದಷ್ಟು ಧ್ಯಾನ, ಪ್ರಾಣಾಯಾಮದಿಂದ ಮನವನ್ನು ಹತೋಟಿಗೆ ತಂದು ಓದುವ ಸಮಯ ಹೆಚ್ಚಿಸಿಕೊಳ್ಳಿ.

ಪರೀಕ್ಷೆ ಎಂದರೆ ಯುದ್ಧ ಎಂದು ಭಾವಿಸಬೇಡಿ. ಯುದ್ಧವೆಂದರೆ ಭಯ ಕಾಡಬಹುದು. ಕ್ರಿಕೆಟ್‌ ಮ್ಯಾಚ್‌ ಅಂತ ಭಾವಿಸಿ. ಬೌಂಡರಿ, ಸಿಕ್ಸ್‌ ಬಾರಿಸುವ ಗುರಿಯಿಟ್ಟುಕೊಳ್ಳಿ. ನಿಮ್ಮ ಗೆಳೆಯರ ಸಹಾಯ ಪಡೆಯಿರಿ.

ಹೆತ್ತವರೇ, ನಿಮ್ಮ ಮಕ್ಕಳ ಸಾಧನೆಗೆ ನೀವೂ ಸಹಕರಿಸಬೇಕು. ನಾವು ಎಲ್ಲ ಸೌಕರ್ಯ ಒದಗಿಸಿದ್ದೇವೆ. ಶಾಲೆಗೆ ಕೇಳಿದಷ್ಟು ಫೀಸ್‌ ಕೊಟ್ಟಿದ್ದೇವೆ ಎಂದು ಹಾಯಾಗಿರಬೇಡಿ. ಮಕ್ಕಳಿಗೆ ಜಡ ತುಂಬಬಲ್ಲ ಆಹಾರ ಕೊಡಬೇಡಿ. ಮಕ್ಕಳೊಂದಿಗೆ ನೀವೂ ಬೇಗನೆ ಏಳಿ, ತಡವಾಗಿ ಮಲಗಿ. ಅವರ ಬಳಿಯಿದ್ದು ನೀವೂ ಯಾವುದಾದರೂ ಪತ್ರಿಕೆಯನ್ನೋ, ಪುಸ್ತಕವನ್ನೋ ಓದುತ್ತಾ ಸಾಥ್‌ ನೀಡಿ. ಮೊಬೈಲ್‌ನಲ್ಲಿ ಜೋರಾಗಿ ಮಾತಾಡುತ್ತಾ ಮಕ್ಕಳ ಓದಿಗೆ ತಡೆಯೊಡ್ಡಬೇಡಿ. ಟಿ.ವಿ.ಯನ್ನು ಕೆಲವು ದಿನಗಳ ಕಾಲ ಬಂದ್‌ ಮಾಡಿ. ಮಕ್ಕಳ ಮುಂದೆ ಲೋಕಾಭಿರಾಮ, ಹರಟೆ ಮಾತಾಡಬೇಡಿ. ಮನೆಯೊಳಗೆ ಶಾಂತ ವಾತಾವರಣವಿರಲಿ. ಭಿನ್ನಾಭಿಪ್ರಾಯ, ಜಗಳಗಳಿಗೆ ಬ್ರೇಕ್‌ ಹಾಕಿ. ಮಕ್ಕಳ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಧೈರ್ಯ ತುಂಬಿ.

Advertisement

ವಿದ್ಯಾರ್ಥಿಗಳೇ, ಮುಖ್ಯಾಂಶಗಳ ಟಿಪ್ಪಣಿ ನಿಮ್ಮ ಜತೆಗಿರಲಿ. ಕೊನೆಯ ಕ್ಷಣದಲ್ಲಿ ಪೂರ್ತಿ ಪಾಠಗಳನ್ನು ಓದುವುದು ಆಗದ ಕೆಲಸ. ಪಕ್ಷಿನೋಟ ಬೀರುತ್ತಾ ಕಲಿಕೆಯಲ್ಲಿ ತೊಡಗಬೇಕು. ಗುರುಗಳ ಮಾರ್ಗದರ್ಶನ ದಾರಿದೀಪ. ಅದು ಅನುಭವದ ಸಾರ. ಅದನ್ನು ಹೀರುವ ಕೆಲಸ ನಿಮ್ಮದಾಗಬೇಕು. “ಆಗದು ಎಂದು, ಕೈಲಾಗದು ಎಂದು, ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ….’ ಹಾಡಿನ ಈ ಸಾಲು ವಿದ್ಯಾರ್ಥಿ ಸಮುದಾಯಕ್ಕೆ ಹೇಳಿದಂತಿದೆ.

ನಾರಾಯಣ ಭಟ್‌ ಟಿ., ರಾಮಕುಂಜ

Advertisement

Udayavani is now on Telegram. Click here to join our channel and stay updated with the latest news.

Next