Advertisement

ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಾಹಸ ತರಬೇತಿ

06:00 AM Jul 09, 2018 | |

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಾಹಸ ಚಟುವಟಿಕೆಗಳ ತರಬೇತಿ ನೀಡಲು ಕಾಲೇಜು ಶಿಕ್ಷಣ
ಇಲಾಖೆ ಮುಂದಾಗಿದೆ.

Advertisement

ಚಿತ್ರದುರ್ಗದ ವಾಣಿ ವಿಲಾಸ ಸಾಗರದಲ್ಲಿ ಜಲ ಸಾಹಸ ಕ್ರೀಡೆ, ರಾಮನಗರದಲ್ಲಿ ಭೂ ಸಾಹಸ, ಮಡಿಕೇರಿಯ ಬರ್ಪೊಳೆಯಲ್ಲಿ ರಿವರ್‌ ರಾಪ್ಟಿಂಗ್‌ ಸಾಹಸದ ಬಗ್ಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.

ಜಲ ಸಾಹಸ ಕ್ರೀಡೆಯಲ್ಲಿ ಬೋಟಿಂಗ್‌, ನೀರಿನಲ್ಲಿ ಮುಳುಗುವುದು, ನೀರಿನಲ್ಲಿ ವೇಗವಾಗಿ ಸಾಗುವುದು ಸೇರಿ ವಿವಿಧ ಸಾಹಸದ ತರಬೇತಿ ನೀಡಲಾಗುತ್ತದೆ. ಭೂ ಸಾಹಸಕ್ಕೆ ಸಂಬಂಧಿಸಿ ಗುಡ್ಡ ಹತ್ತಿ ಇಳಿಯುವುದು, ಗುಡ್ಡದ ಮೇಲಿಂದ ಹಾರುವುದು ಮತ್ತು ರಿವರ್‌ ರಾಪ್ಟಿಂಗ್‌ನಲ್ಲಿ ಪ್ರವಾಹದ ಸಂದರ್ಭದಲ್ಲಿ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬುದರ ತರಬೇತಿ ನೀಡುವುದು ಯೋಜನೆಯ ಪ್ರಮುಖ
ಅಂಶಗಳಾಗಿವೆ.

ಕಾಲೇಜು ವಿದ್ಯಾರ್ಥಿಗಳಿಗೆ, ಎನ್‌ಎಸ್‌ಎಸ್‌ ಸಂಯೋಜಕರಿಗೆ, ದೈಹಿಕ ಶಿಕ್ಷಣ ನಿರ್ದೇಶಕರಿಗೆ
ಮತ್ತು ಆಸಕ್ತ ಪ್ರಾಧ್ಯಾಪಕರಿಗೆ ಸಾಹಸ ಚಟುವಟಿಕೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಜುಲೈ 10 ರಿಂದ ತರಬೇತಿ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಕಡ್ಡಾಯವಾಗಿ ಮೂರು ದಿನಗಳ ಸಾಹಸ ಚಟುವಟಿಕೆಗಳ ಶಿಬಿರ ನಡೆಸಲು ತೀರ್ಮಾನಿಸಿದೆ.

ಯೋಜನೆ ನೀಲನಕ್ಷೆ ಸಿದ್ಧ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ರಾಷ್ಟ್ರೀಯ ಸೇವಾ ಯೋಜನೆ ಕೋಶ(ಎನ್‌ಎಸ್‌ಎಸ್‌) ಸಹಯೋಗದಲ್ಲಿ ಸಾಹಸ ಚಟುವಟಿಕೆಯ ಶಿಬಿರ ನಡೆಸಲು ನೀಲನಕ್ಷೆ ಸಿದಟಛಿವಾಗಿದ್ದು, ಈ ಸಂಬಂಧ
ಎಲ್ಲ ಕಾಲೇಜುಗಳಿಗೂ ಇಲಾಖೆಯಿಂದ ಪತ್ರ ಬರೆಯಲಾಗಿದೆ.

Advertisement

ಮೂರು ದಿನ ತರಬೇತಿ: ಜುಲೈ 10ರಿಂದ 12ರ ವರೆಗೆ ರಾಜ್ಯದ ಮೂರು ಕಡೆಗಳಲ್ಲಿ ಮೂರು ವಿಧದ ಸಾಹಸ ಚಟುವಟಿಕೆಯ ತರಬೇತಿ ಶಿಬಿರ ನಡೆಯಲಿದೆ.

ಕಡ್ಡಾಯವಾಗಿ ದೈಹಿಕ ಶಿಕ್ಷಣ ನಿರ್ದೇಶಕರನ್ನು ಅಥವಾ ಪ್ರಾಧ್ಯಾಪಕರೊಬ್ಬರನ್ನು ಕಳುಹಿಸಿಕೊಡುವಂತೆ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಇಲ್ಲದ ಕಾಲೇಜುಗಳಿಂದ ಬೇರೆ ಪ್ರಾಧ್ಯಾಪಕರೊಬ್ಬರು ಕಡ್ಡಾಯವಾಗಿ ಈ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಲಾಗಿದೆ.

ಮೈಸೂರು, ಕಲಬುರಗಿ ವಿಭಾಗದ ದೈಹಿಕ ಶಿಕ್ಷಕರಿಗೆ ಜಲ ಸಾಹಸ ಕ್ರೀಡೆಗಳ ತರಬೇತಿಯನ್ನು ಚಿತ್ರದುರ್ಗದ ವಾಣಿವಿಲಾಸ್‌ ಸಾಗರದಲ್ಲಿ, ಮಂಗಳೂರು ಮತ್ತು ಧಾರವಾಡ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕರಿಗೆ ರಾಮನಗರ ಜಿಲ್ಲೆಯಲ್ಲಿ ಭೂ ಸಾಹಸದ ತರಬೇತಿ ನೀಡಲಾಗುತ್ತದೆ. ಶಿವಮೊಗ್ಗ ಮತ್ತು ಬೆಂಗಳೂರು ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಮಡಿಕೇರಿಯ ಬರ್ಪೊಳೆಯಲ್ಲಿ ರಿವರ್‌ ರಾಪ್ಟಿಂಗ್‌ ಸಾಹಸದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ತರಬೇತಿಯಲ್ಲಿ 50 ನಿರ್ದೇಶಕರು ಅಥವಾ ಪ್ರಾಧ್ಯಾಪಕರಿಗೆ ಮಾತ್ರ ಅವಕಾಶ ಇರುತ್ತದೆ. ಇದಕ್ಕಾಗಿ ಇಬ್ಬರು ನೋಡಲ್‌ ಅಧಿಕಾರಿಗಳನ್ನು
ನೇಮಿಸಲಾಗಿದೆ. ತರಬೇತಿಗೆ ಹಾಜರಾಗಲಿರುವ ಎಲ್ಲ ಶಿಬಿರಾರ್ಥಿಗಳ ಮಾಹಿತಿ ಸಂಗ್ರಹಣೆ ನೋಡಲ್‌
ಅಧಿಕಾರಿಗಳು ಮಾಡಿಕೊಂಡಿದ್ದಾರೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next