Advertisement

ಸಾಹಸ ಬಂಟರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ: ಸಂಸದ ಗೋಪಾಲ್‌ ಶೆಟ್ಟಿ

07:43 PM Jan 12, 2021 | Team Udayavani |

ಮುಂಬಯಿ, ಜ. 11: ಬಂಟರ ಸಮಾಜವು ಹಿಂದುತ್ವದ ಜತೆ ಜತೆಗೆ ಸಾಗುತ್ತಿರುವ ಸಮಾಜವಾಗಿದೆ. ಹಿಂದುತ್ವವೇ ನಮ್ಮ ಕುಟುಂಬವೆಂದು ಪ್ರೀತಿ, ಗೌರವ ತೋರುತ್ತಿರುವ ಹಾಗೂ ಹಿಂದುತ್ವದೊಂದಿಗೆ ಸಮ್ಮಿಳಿತಗೊಂಡಿರುವ ಬಂಟ ಸಮಾಜದ ಬಗ್ಗೆ ನನಗೆ ಅತೀವ ಅಭಿಮಾನ, ಗೌರವವಿದೆ ಎಂದುಉತ್ತರ ಮುಂಬಯಿ ಸಂಸದ ಗೋಪಾಲ್‌ ಸಿ. ಶೆಟ್ಟಿ ನುಡಿದರು.

Advertisement

ಜ. 10ರಂದು ಸಂಜೆ ಬಂಟರ ಸಂಘದ ಶಶಿಮನ್‌ ಮೋಹನ್‌ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದ ಆಧುನಿಕ ಪ್ರವೇಶದ್ವಾರ ಹಾಗೂ ವಿವಿಧ ವಿಶೇಷ ಸೌಲಭ್ಯಗಳ ಅಂತಿಮ ಹಂತದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡ ಸಂದರ್ಭದಲ್ಲಿ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ, ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಬಂಟರ ಸಂಘವಿಂದು ಎಲ್ಲ ವಿಧದಲ್ಲೂ ಆತ್ಮನಿರ್ಭರವಾಗಿ ಬೆಳೆಯುತ್ತಿದೆ. ಮುಖ್ಯವಾಗಿ ಶಿಕ್ಷಣ ರಂಗದಲ್ಲಂತೂ ಬಹುದೊಡ್ಡ ಇತಿಹಾಸ ಬರೆದು ಕ್ರಾಂತಿ ಎಬ್ಬಿಸಿರುವುದನ್ನು ನಾವು ಕಾಣಬಹುದಾಗಿದೆ ಎಂದರು.

ಬಂಟರು ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿರುವ ಸಾಧನೆ, ಅವರ ಅಪಾರ ಪರಿಶ್ರಮ, ಸಾಹಸ ಅವರ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಸಾಹಸಿಗರಾದ ಬಂಟರು ಎದೆ ತಟ್ಟಿ ನಿಂತು ಯಾವುದೇ ಸಮಸ್ಯೆಗಳನ್ನು ನಿವಾರಿಸಬಲ್ಲ ಶೂರರು, ಧೀಮಂತರು ಎಂದು ಸಂಸದ ಗೋಪಾಲ್‌ ಶೆಟ್ಟಿ ಅಭಿಪ್ರಾಯಿಸಿದರು. ಬಂಟರ ಸಂಘದ ಅಭಿವೃದ್ಧಿಯಲ್ಲಿ ಹಿರಿಯರ ಕೊಡುಗೆಯನ್ನು ಸ್ಮರಿಸಿದ ಅವರು, ಬಂಟರ ಏಳ್ಗೆಗಾಗಿ ಹಿರಿಯರ ಚಿಂತನೆ ಏನಿತ್ತೆಂಬುವುದನ್ನು ನಾವೀಗ ಅರಿತುಕೊಳ್ಳಬಹುದು. ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವಂತೆ ಸಂಸದ ಗೋಪಾಲ್‌ ಶೆಟ್ಟಿ ಅವರು ಕಿವಿಮಾತು ಹೇಳಿದರು.

ಸಂಘದ ಉನ್ನತ ಶಿಕ್ಷಣ ಸಂಕೀರ್ಣ ಯೋಜನೆಯ ಯಶಸ್ಸಿಗೆ ಸಹಕರಿಸಿದ ಬಂಟರನ್ನು, ಇತರ ಬಂಧು ಬಾಂಧವರನ್ನು ಅಭಿನಂದಿಸಿದ ಅವರು, ಸಂಘದ ಯಾವುದೇ ಯೋಜನೆಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭಹಾರೈಸಿದರು. ಸಂಘದ ಗೋಪಾಲ್‌ ಸಿ. ಶೆಟ್ಟಿ ಅವರು ಉನ್ನತ ಶಿಕ್ಷಣ ಸಂಸ್ಥೆಯ ವಿವಿಧ ಸೌಲಭ್ಯಗಳನ್ನು ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು. ಸಮಾರಂಭವನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭಪಯ್ಯಡೆ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.

ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಕಿಶೋರ್‌ ಕುಮಾರ್‌ ಕುತ್ಯಾರ್‌, ಉಪ ಕಾರ್ಯಾಧ್ಯಕ್ಷೆ ಮಮತಾ ಎಂ. ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಭಾಸ್ಕರ್‌ ಶೆಟ್ಟಿ, ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕೋಶಾಧಿಕಾರಿ ಸಿಎ ರಮೇಶ್‌ ಶೆಟ್ಟಿ, ಸಂಘದ ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:ಅಷ್ಟಬಂಧ ಸಹಿತ ಪುನರ್‌ ಪ್ರತಿಷ್ಠಾಪನೆ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ

ಉನ್ನತ ಶಿಕ್ಷಣ ಸಂಕುಲದ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು, ಶಿಕ್ಷಕರು, ಆಡಳಿತ ಕಚೇರಿಯ ಅಧಿಕಾರಿಗಳು, ಸಿಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತಳ ಮಹಡಿಯಲ್ಲಿ ನಿರ್ಮಿಸಲಾಗಿರುವ ನೂತನ ವ್ಯಾಯಾಮ ಶಾಲೆ, ಕೆಪಿಟೇರಿಯಾ, ಐದನೇ ಮಹಡಿಲ್ಲಿರುವ ಆರತಿ ಶಶಿಕಿರಣ್‌ ಶೆಟ್ಟಿ ಜ್ಯೂನಿಯರ್‌ ಕಾಲೇಜು ತರಗತಿ ಕೊಠಡಿ, ಪ್ರಾಂಶುಪಾಲರ ಕೊಠಡಿ, ಆಡಳಿತ ಕಚೇರಿ ಹಾಗೂ ಆರನೇ ಮಹಡಿಯಲ್ಲಿರುವ ವಾಚನಾಲಯ, ಉಮಾಕೃಷ್ಣ ಶೆಟ್ಟಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಆ್ಯಂಡ್‌ ರೀಸರ್ಚ್‌ ಸೆಂಟರ್‌, ಉಮಾಕೃಷ್ಣ ಶೆಟ್ಟಿ ಶಿಕ್ಷಣ ಸಂಸ್ಥೆಯ ನಿರ್ದೇಶಕರ ಕೊಠಡಿ, ಶಿಕ್ಷಕರ ಕೊಠಡಿ, ಮಾರ್ಗದರ್ಶಕ ಪರದೆ ಇನ್ನಿತರ ಸೌಲಭ್ಯಗಳಿಗೆ ಗಣ್ಯರು ಚಾಲನೆ ನೀಡಿ ಶುಭಹಾರೈಸಿದರು. ಕೋವಿಡ್‌ ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವು ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಘದ ಸದಸ್ಯ ಬಾಂಧವರು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next