Advertisement

ಅಡ್ವೆಂಚರ್‌ ಬೈಕ್‌ ದುನಿಯಾ

06:00 AM Sep 24, 2018 | |

ಆಟೋಮೊಬೈಲ್‌ ಕ್ಷೇತ್ರ ನಿಂತ ನೀರಲ್ಲ. ಪ್ರತಿ ಸಂದರ್ಭದಲ್ಲೂ ಅದು ಒಂದಲ್ಲ ಒಂದು ಹೊಸತು ವಿನ್ಯಾಸವನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಲ್ಲೂ ಕಳೆದ ಮೂರು ದಶಕದಲ್ಲಾದ ತಂತ್ರಜ್ಞಾನ ಕ್ರಾಂತಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಹತ್ತಾರು ಬಗೆಯ ಬದಲಾವಣೆಗಳಿಗೆ ನಾಂದಿ ಹಾಡಿದೆ. 

Advertisement

ಇಂಥ ಬೆಳವಣಿಗೆಗಳ ನಡುವೆ ಇಂದಿನ ಯುವಕ-ಯುವತಿಯರು ವಾಹನ ಸಾಹಸಗಳತ್ತ ಸಾಕಷ್ಟು ಒಲವು ತೋರಿಸುತ್ತಿದ್ದಾರೆ. ಇದರಿಂದ ಆಫ್ ರೋಡ್‌ ವಾಹನ ಕ್ಷೇತ್ರವೂ ಹೊರತಾಗಿಲ್ಲ. ಇದರಿಂದಾಗಿಯೇ ಅನೇಕ ಆಫ್ ರೋಡ್‌ ವಾಹನಗಳು ಮಾರುಕಟ್ಟೆಗೆ ಪರಿಚಯಗೊಳ್ಳುತ್ತಿವೆ. ಜತೆಗೆ ಅದೊಂದು ಪ್ರಮುಖ ಅಡ್ವೆಂಚರ್‌ ಉದ್ಯಮವಾಗಿಯೂ ಬೆಳೆದುನಿಂತಿದೆ.

 ಈ ಮಾದರಿಯ ವಾಹನಗಳ ಉತ್ಪಾದನೆಯೊಂದಿಗೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಂಪನಿ ಅಮೆರಿಕ ಮೂಲದ ಪೊಲಾರಿಸ್‌. ಭಾರತದಲ್ಲಿಯೂ ತನ್ನ ಮಾರುಕಟ್ಟೆಯನ್ನು ಸಾಕಷ್ಟು ವಿಸ್ತರಿಸಿಕೊಂಡಿರುವ ಈ ಕಂಪನಿ, ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ತನ್ನ ಉತ್ಪಾದನೆಗಳ ಪೈಕಿ ಕೆಲವು ವಾಹನಗಳನ್ನು ಈಗಾಗಲೇ ಭಾರತದಲ್ಲಿ ಪರಿಚಯಿಸಿದ್ದು, ಯುವ ಜನತೆಯನ್ನೇ ಗುರಿಯಾಗಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅಷ್ಟೇ ಅಲ್ಲ, ಲಕ್ಷಾಂತರ ಮಂದಿ ಗ್ರಾಹಕರನ್ನೂ ಸೃಷ್ಟಿಸಿಕೊಂಡಿದೆ. ಕಂಪನಿ ತನ್ನ ಉತ್ಪಾದನೆಗಳನ್ನು ಪರಿಚಯಿಸಲಿಕ್ಕಾಗಿಯೇ ದೇಶದಲ್ಲಿ 84 ಎಕ್ಸ್‌ಪೀರಿಯನ್ಸ್‌ ಝೋನ್‌ಗಳನ್ನು ನಿರ್ಮಿಸಿದೆ.

ವಾಹನಗಳ ವೈಶಿಷ್ಟತೆ: ಪೊಲಾರಿಸ್‌ ಭಾರತದಲ್ಲಿ ಪರಿಚಯಿಸಿರುವ ನಾಲ್ಕು ವ್ಹೀಲ್‌ ಡ್ರೆçವ್‌ ವಾಹನಗಳ ಒಟ್ಟಾರೆ ವಿನ್ಯಾಸವೇ ಭಿನ್ನ. ಮೋಟಾರ್‌ ಬೈಕ್‌ ರೀತಿಯಲ್ಲೇ ಹ್ಯಾಂಡಲ್‌ ಹೊಂದಿರುವ ನಾಲ್ಕು ಚಕ್ರಗಳ ವಾಹನಗಳು ಆಫ್ ರೋಡ್‌ ಬಳಕೆಗೆಂದೆ ವಿನ್ಯಾಸಗೊಂಡಿರುವಂಥವು.

Advertisement

ಗರಿಷ್ಠ ವೇಗದ ಮಿತಿ ಕಡಿಮೆಯಾಗಿರುತ್ತದೆಯಾದರೂ ಸಾಹಸ ಪ್ರವೃತ್ತಿಯವರು ಹೆಚ್ಚು ಇಷ್ಟಪಡುವಂತಹ ವಾಹನಗಳು ಇವಾಗಿವೆ. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ಆರ್‌ಝಡ್‌ಆರ್‌, ಜನರಲ್‌, ರೇಂಜರ್‌, ಯೂತ್‌ ಮತ್ತು ನ್ಪೋರ್ಟ್ಸ್ಮನ್‌ ಬೈಕ್‌ಗಳು ಲಭ್ಯ.

ಇವೆಲ್ಲವೂ ಆಫ್ ರೋಡ್‌ ಬೈಕ್‌ಗಳೇ ಆಗಿದ್ದು, ಮೇಲ್ನೋಟಕ್ಕೆ ಥಾರ್‌ ಜೀಪ್‌ಗೆ ಹೋಲುವಂತೆ ಇರುತ್ತವೆ. ಆದರೆ ಗಾತ್ರದಲ್ಲಿ ಚಿಕ್ಕದಾಗಿರುತ್ತದೆಯಷ್ಟೆ. ಇಬ್ಬರು, ನಾಲ್ವರು, ಆರು ಮಂದಿ ಕುಳಿತುಕೊಂಡು ಸಾಗಬಹುದಾದ ರೀತಿಯಲ್ಲಿಯೂ ಈ ವಾಹನವನ್ನು ವಿನ್ಯಾಸಪಡಿಸಿಕೊಳ್ಳಲು ಅವಕಾಶವಿದೆ. ಅಷ್ಟೇ ಅಲ್ಲ, ಆಫ್ ರೋಡ್‌ನ‌ಲ್ಲಿ ಪಿಕ್‌ಅಪ್‌ ವಾಹನಗಳಂತೆ ವಿನ್ಯಾಸ ಬದಲಾಯಿಸಿಕೊಳ್ಳಲೂ ಸಾಧ್ಯವಿರುತ್ತದೆ.

ರೈಡಿಂಗ್‌ ಥ್ರಿಲ್‌: ಟ್ರಾಕ್ಟರ್‌ಗಳಲ್ಲಿ ಬಳಸಲಾಗುವ ಟಯರ್‌ಗಳನ್ನೇ ಪೊಲಾರಿಸ್‌ ವಾಹನಗಳಲ್ಲಿಯೂ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಎಂಥಹುದೇ ಕಲ್ಲು, ಮುಳ್ಳು, ಹುಲ್ಲು, ಅರಲು ಗದ್ದೆಗಳಲ್ಲಿಯೂ ಸುಲಭವಾಗಿ ಓಡಿಸಬಹುದು. ಆದರೆ ಸ್ಟೀರಿಂಗ್‌ ಹಿಡಿದು ತಿರುಗಿಸುವ ಮಾದರಿ ಇದಾಗಿರುವುದಿಲ್ಲ. ಸ್ಕೂಟರ್‌, ಬೈಕ್‌, ಆಟೋಗಳಲ್ಲಿ ಇರುವಂತೆ ಹ್ಯಾಂಡಲ್‌ ಹಿಡಿದು ವಾಹನದ ಡೈರೆಕ್ಷನ್‌ ಬದಲಾಯಿಸಿ ಕೊಳ್ಳಬೇಕಾಗುತ್ತದೆ.

ನಾಲ್ಕು ಚಕ್ರಗಳ ಒತ್ತಡ ಇರುವ ಕಾರಣ ಹ್ಯಾಂಡಲ್‌ ಬೈಕ್‌ಗಳಿಗಿಂಥ ಕೊಂಚ ಬಿಗು ಅನಿಸುತ್ತದೆ. ಅದೆಲ್ಲದಕ್ಕಿಂತ ರೈಡರ್‌ ಗುಂಡಿಗೆ ಹೊಂದಿರಬೇಕು. ರೈಡರ್‌ನ ಬಲ ಬದಿಯಲ್ಲಿ ಮುಂಭಾಗಕ್ಕೆ ಗೇರ್‌ ಬಾಕ್ಸ್‌ ಅಳವಡಿಸಿರಲಾಗುತ್ತದೆ. ಬಲಗೈ ಹ್ಯಾಂಡಲ್‌ನ ಹೆಬ್ಬೆರಳನ್ನು ಉಪಯೋಗಿಸಿಕೊಂಡು ಓಡಿಸುವಂತೆ ಎಕ್ಸಲರೇಟರ್‌ ಪ್ಲಗ್‌ ಅಳವಡಿಸಿರಲಾಗುತ್ತದೆ. ಕಾಲಿಗೆ ಯಾವುದೇ ಕೆಲಸ ಇರುವುದಿಲ್ಲ. ಎಡಗೈ ಹ್ಯಾಂಡಲ್‌ಗೆ ಬೈಕ್‌ಗಳಲ್ಲಿರುವಂತೆ ಬ್ರೇಕ್‌ ನೀಡಲಾಗಿರುತ್ತದೆ.

ಎಂಜಿನ್‌ ಸಾಮರ್ಥ್ಯ: ಆಫ್ ರೋಡ್‌ ಡ್ರೈವ್‌ನಲ್ಲಿ ಯಾವುದೇ ಸವಾಲನ್ನೂ ಸಲೀಸಾಗಿ ಪೂರೈಸುವ ರೀತಿಯಲ್ಲೇ ಬಲಿಷ್ಠವಾದ ಎಂಜಿನ್‌ ಬಳಸಲಾಗಿದೆ. 570ಸಿಸಿ ಸಿಂಗಲ್‌ ಸಿಲಿಂಡರ್‌ ಹಾಗೂ ಟ್ವಿನ್‌ ಸಿಲಿಂಡರ್‌ ಎಂಜಿನ್‌ 900ಸಿಸಿಯಿಂದ ಒಳಗೊಂಡಿರುತ್ತದೆ. ಎಂಜಿನ್‌ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶವನ್ನೂ ಹೊಂದಿದೆ ಕಂಪನಿ

ಡರ್ಟ್‌ ಮೇನಿಯಾ: ಪೊಲಾರಿಸ್‌ ವಾಹನಗಳ ಡ್ರೈವ್‌ಗಾಗಿ ಮಂಗಳೂರು ಮೂಲದ ಡರ್ಟ್‌ ಮೇನಿಯಾ ಅಡ್ವೆಂಚರ್‌ ಸಂಸ್ಥೆ ಬೆಂಗಳೂರಿನ ಕನಕಪುರ ರಸ್ತೆಯ ನೆಲಗುಳಿ  ಹಾಗೂ ಮಂಗಳೂರಿನ ಬೀಚ್‌ನಲ್ಲಿ ಸೇವೆ ನೀಡುತ್ತಿದ್ದು, ಇದೀಗ ನಂದಿ ಬೆಟ್ಟದ ತಪ್ಪಲಲ್ಲಿಯೂ ಮಗದೊಂದು ಶಾಖೆ ಆರಂಭಿಸಿದೆ.

ಸುರಕ್ಷತಾ ಜಾಕೆಟ್‌ ಕಡ್ಡಾಯ: ಆರ್‌ಟಿಒ ನೋಂದಣಿ ಹೊಂದಿರದ ಈ ವಾಹನಗಳನ್ನು ಎಲ್ಲೆಂದರಲ್ಲಿ ಓಡಿಸುವಂತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಇದಕ್ಕೆಂದೇ ಗುರುತಿಸಿಕೊಳ್ಳಲಾದ ಹಾಗೂ ಸಾಹಸ ಪ್ರದರ್ಶನದ ಡ್ರೈವ್‌ಗೆ ಪೂರಕ ರಸ್ತೆಯನ್ನು ಗುರುತಿಸಿ ಅಲ್ಲಷ್ಟೇ ಓಡಿಸಹುದು. ಡ್ರೈವ್‌ ವೇಳೆ ಸುರಕ್ಷತೆಯ ದೃಷ್ಟಿಯಿಂದ ರಕ್ಷಾ ಕವಚ, ಹೆಲ್ಮೆಟ್‌ ಧರಿಸಿರುವುದು ಕಡ್ಡಾಯ.

ಬಳಕೆ ಎಲ್ಲೆಲ್ಲಿ?
– ವಾಹನ ಸಾಹಸಿಗರು ಕ್ರೇಜ್‌ಗಾಗಿ ಓಡಿಸುವುದುಂಟು
– ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬಳಕೆ
– ನೂರಾರು ಎಕರೆ ಜಮೀನುದಾರರು ಬೆಳೆ, ಸಾಮಗ್ರಿ ಸಾಗಿಸಲು ಸಹಕಾರಿ
– ಭೂಕುಸಿತ, ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಬಳಕೆ
– ಕಾರ್ಖಾನೆಗಳಲ್ಲಿ ವಸ್ತುಗಳ ಸಾಗಾಟಕ್ಕೂ ಬಳಕೆ
– ಹಿಮ ಪ್ರದೇಶ, ಮರುಭೂಮಿ ಪ್ರದೇಶಗಳಲ್ಲಿ ಬಳಕೆ

* ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next