ಯಳಂದೂರು: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಜಿಎಸ್‌ಟಿ ತೆರಿಗೆಯಿಂದ ಮಾರಾಟಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮೈಸೂರಿನ ವಾಣಿಜ್ಯ ತೆರಿಗೆಯ ಸಹಾಯಕ ಆಯುಕ್ತ ಶಿವಣ್ಣ ತಿಳಿಸಿದರು.
ಪಟ್ಟಣದ ಬಳೇಪೇಟೆಯ ಶ್ರೀರಾಮ ಮಂದಿರದಲ್ಲಿ ವರ್ತಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಎಸ್‌ಟಿ ಕುರಿತಾದ ಮಾಹಿತಿ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಎಸ್‌ಟಿಯಿಂದ ಏಕರೂಪ ತೆರಿಗೆ ಜಾರಿಯಾಗಿದೆ. ಹೀಗಾಗಿ ವರ್ತಕರು ಹೊರ ರಾಜ್ಯಗಳಿಂದ ಸರಕು ಖರೀದಿ, ಮಾರಾಟ ಮಾಡಲು ಅನುಕೂಲವಾಗುತ್ತದೆ. ದಿನಬಳಕೆ ವಸ್ತುಗಳ ದರಗಳು ಕಡಿಮೆಯಾಗಲಿವೆ ಎಂದರು.
ಹೆಚ್ಚು ಹೆಚ್ಚು ತೆರಿಗೆ ಕಟ್ಟಿದ್ದಲ್ಲಿ ಕಡಿಮೆ ಬೆಲೆಯಾಗುವ ನಿರೀಕ್ಷೆಯಿಂದ ಈ ತೆರಿಗೆ ಪದ್ಧತಿ ಜಾರಿಗೆ ತರಲಾಗಿದೆ. ಈ-ಸುಗಮ್ ಯೋಜನೆಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ. ಇದು ಈಗ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದರಿಂದ ಇನ್ನಷ್ಟು ಅನುಕೂಲವಾಗಲಿದೆ. ತೆರಿಗೆ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಂಬಂಧಪಟ್ಟ ಇಲಾಖೆಯ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
20 ಲಕ್ಷ ರೂ. ವಹಿವಾಟು ನಡೆಸುವವರ ಜಿಎಸ್ಟಿ ಮಾಡಿಸಬೇಕು: ಸರಕು ಮತ್ತು ಸೇವಾ ತೆರಿಗೆ ಅಧಿಕಾರಿ ಉದಯ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬ ವರ್ತಕರೂ ಜಿಎಸ್‌ಟಿ ಸಂಬಂಧಿತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಇದಕ್ಕಾಗಿಯೇ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ. ಕಿರಾಣಿ, ಬಟ್ಟೆ, ಒಡವೆ, ಗುತ್ತಿಗೆದಾರರು, ಕಲ್ಯಾಣ ಮಂಟಪಗಳು ಸೇರಿದಂತೆ ವಿವಿಧ ವರ್ತಕರಿಗೆ ಜಿಎಸ್‌ಟಿಯಲ್ಲಿ ಶೇಕಡವಾರು ಪ್ರಮಾಣ ಭಿನ್ನವಾಗಿರುತ್ತದೆ. 20 ಲಕ್ಷ ರೂ.ಗಿಂತ ಅಧಿಕವಾಗಿ ವಹಿವಾಟು ನಡೆಸುವ ಪ್ರತಿಯೊಬ್ಬ ವ್ಯಾಪಾರಿಯೂ ಜಿಎಸ್‌ಟಿ ಮಾಡಿಸಿಕೊಳ್ಳಲೇಬೇಕು ಎಂದು ಹೇಳಿದರು.
ಅಂತರ್ಜಲದಿಂದಲೇ ವ್ಯವಹರಿಸಿ: ಇದು ಇ-ವ್ಯವಹಾರದಲ್ಲೆ ತೆರಿಗೆ ಬಗ್ಗೆ ಸಂಬಂಧಪಟ್ಟ ವ್ಯಕ್ತಿಯ ವೆಬ್‌ಸೈಟ್ ಅಥವಾ ಮೊಬೈಲ್ ನಂಬರಿಗೆ ಮಾಹಿತಿ ಬರುವುದರಿಂದ ಆದಷ್ಟು ಕಂಪ್ಯೂಟರ್‌ನಲ್ಲೇ ವ್ಯವಹರಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ಪ್ರತಿಯೊಬ್ಬರೂ ತಪ್ಪದೆ ರಸೀತಿಯನ್ನು ಪಡೆಯಬೇಕು. ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಜಿಎಸ್‌ಟಿಗೆ ಜೋಡಿಸಬೇಕು. ಕೊಳ್ಳೇಗಾಲ ವಿಭಾಗದ ವ್ಯಾಪ್ತಿಯಲ್ಲಿ ಇನ್ನೂ 61 ಮಂದಿ ಪಾನ್ ಜೋಡಿಸಿಲ್ಲ. ಇದರಿಂದ ಮುಂದೆ ತೊಂದರೆಯಾಗುವ ಅಪಾಯವಿದ್ದು ಈ ಕೆಲಸವನ್ನು ಶೀಘ್ರದಲ್ಲೇ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಇಲಾಖೆಯ ಅಧಿಕಾರಿಗಳು ಪ್ರತಿ ಅಂಗಡಿಗೂ ಭೇಟಿ ನೀಡಿ ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿಸಿದರು. ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಬಸವರಾಜು, ಪದ್ಮಾವತಿ, ವಾರಿಸ್ ಆಡಿಟರ್ ಪುಟ್ಟಮಾದಪ್ಪ, ವರ್ತಕರ ಸಂಘದ ಅಧ್ಯಕ್ಷ ನಯಾಜ್‌ಖಾನ್, ಸದಸ್ಯರಾದ ನಿರಂಜನ್, ಹಬೀಬುಲ್ಲಾಖಾನ್, ನಾಗರಾಜು, ಶ್ರೀನಿವಾಸ, ಅನಿಲ್‌ಕುಮಾರ್ ಇತರರು ಹಾಜರಿದ್ದರು.ಇಲಾಖೆಯ ವಾರಿಸ್ ಉದ್ಘಾಟಿಸಿದರು.