Advertisement

ಕೌಶಲಾಧಾರಿತ ಪಠ್ಯದಿಂದ ಶಿಕ್ಷಣ ಪ್ರಗತಿ

11:42 AM Nov 25, 2019 | Suhan S |

ಬೆಳಗಾವಿ: ಯುಜಿಸಿ ನಿಯಮಾವಳಿಗಳ ಮಾರ್ಗಸೂಚಿಗಳಂತೆ 2020-21ರ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್‌ಗಳಿಗೆ ಅನ್ವಯವಾಗುವಂತೆ ಪಠ್ಯಕ್ರಮ ಪುನರ್‌ ರಚನೆಯಲ್ಲಿ ಅಭ್ಯಾಸಸೂಚಿಯು ದೇಶದ ಪ್ರಗತಿ ಹೊಂದಿದಂತೆ ವಿದ್ಯಾರ್ಥಿಗಳ ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಗುಣಾತ್ಮಕವಾಗಿರುವಂತಹ ಬದಲಾವಣೆಗಳನ್ನು ತರುವುದು ಉನ್ನತ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವಾಗಬೇಕಾಗಿದೆ ಎಂದು ಸ್ಕೂಲ್‌ ಆಫ್‌ ಎಜುಕೇಶನ್‌ನ ನಿರ್ದೇಶಕ ಡಾ| ಎಂ.ಸಿ. ಎರ್ರಿಸ್ವಾಮಿ ಹೇಳಿದರು.

Advertisement

ಇಲ್ಲಿಯ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಎಜುಕೇಶನ್‌ ವತಿಯಿಂದ ರವಿವಾರ ಯುಜಿಸಿ ಮಾರ್ಗಸೂಚಿಗಳಂತೆ ಚಾಯ್ಸ ಬೇಸ್ಡ್ ಕ್ರೆಡಿಟ್‌ ಸಿಸ್ಟ್‌ಂ ಸ್ಕೀಮ್‌ ಅಡಿಯಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯ ಮಟ್ಟದ ಪಠ್ಯಕ್ರಮ ಪುನರ್‌ ರಚನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಬದಲಾವಣೆಗೆ ಪುನರ್‌ ಹೊಂದಾಣಿಕೆ, ಪುನರ್‌ ರಚನೆ ಮತ್ತು ಪುನಶ್ಚೇತನ ಪ್ರಕ್ರಿಯೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆದರ್ಶ ಮನೋಭಾವನೆಗಳನ್ನು ಬೆಳೆಸಬೇಕಾಗಿದೆ. 21ನೇ ಶತಮಾನದಲ್ಲಿ ವಿವಿಧ ಶಾಸ್ತ್ರೀಯ ವಿಷಯಗಳಾದ ವಿಜ್ಞಾನ, ಸಮಾಜ ವಿಜ್ಞಾನ, ಕಲೆ, ಮಾನವಿಕ, ಭಾಷೆ, ವೃತ್ತಿಪರ, ತಾಂತ್ರಿಕ ಹಾಗೂ ತಂತ್ರಜ್ಞಾನ ವಿಷಯಗಳ ಮೂಲಕ ಸಮಾಜದಲ್ಲಿ ಒಂದು ಕೊಡುಗೆಯಾಗಿ ಉತ್ತಮ ಸಮಾಜದ ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರದ ಭವಿಷ್ಯದ ದೃಷ್ಟಿ ಹಾಗೂ ವಿದ್ಯಾರ್ಥಿಗಳಲ್ಲಿ ಕೌಶಲಗಳನ್ನು ಹೆಚ್ಚಿಸುವ ಉದ್ದೇಶಗಳನ್ನು ಇಟ್ಟುಕೊಂಡು ನಾವು ಬೋಧಿಸುವ ವಿಷಯಗಳಲ್ಲಿ ಕೌಶಲಾಧಾರಿತ ವಿಷಯಗಳು ಹಾಗೂ ಉನ್ನತ ಶಿಕ್ಷಣದ ಗುಣಾತ್ಮಕತೆ ಕಾಪಾಡುವ ದೃಷ್ಟಿಯನ್ನಿಟ್ಟುಕೊಂಡು ಪಠ್ಯಕ್ರಮ ರಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಪ್ರೊ| ವಿ.ಎಸ್‌. ತೂಗಶೆಟ್ಟಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಶಿಕ್ಷಣ ಶಾಸ್ತ್ರದ ವಿಷಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿಷಯದ ಸಂಪೂರ್ಣ ಮಾಹಿತಿಯನ್ನು ಹಾಗೂ ಕೌಶಲ ಬೆಳವಣಿಗೆಗಳ ವಿಷಯಗಳನ್ನು ಪರಿಚಯಿಸುವುದರ ಮೂಲಕ ಒಂದು ಮಾದರಿ ಪಠ್ಯಕ್ರಮವನ್ನು ನಾವು ತರಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ವಿವಿಧ ಕಾಲೇಜುಗಳ ಶಿಕ್ಷಣ ವಿಷಯದ ಪ್ರಾಧ್ಯಾಪಕರು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಡಾ| ಪೂರ್ಣಿಮಾ ಪಟ್ಟಣಶೆಟ್ಟಿ, ಪ್ರೊ| ಬಿ.ಎ.ಪಾಟೀಲ, ಪ್ರೊ| ಅಶೋಕ ಮೆಂಡಿಗೆರಿ ಉಪಸ್ಥಿತರಿದ್ದರು. ಕಾವೇರಿ ಬುಕ್ಯಾಳಕರ ಪ್ರಾರ್ಥಿಸಿದರು. ವಿ.ಎಸ್‌. ಕಾಂಬಳೆ ನಿರೂಪಿಸಿದರು. ಡಾ| ಸರೋಜಾ ಎಸ್‌. ಗುಡದೂರ ವಂದಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next