Advertisement

ನಗರದಲ್ಲಿ ಮುಂದುವರಿದ ವರ್ಷಧಾರೆ; ವಿವಿಧೆಡೆ ಹಾನಿ, ಟ್ರಾಫಿಕ್‌ ಜಾಮ್‌

11:01 PM Jul 23, 2019 | mahesh |

ಮಹಾನಗರ: ಮುಂಗಾರು ಪ್ರವೇಶ ಪಡೆದು ಒಂದೂವರೆ ತಿಂಗಳು ಕಳೆದರೂ ಮಳೆಯಿಲ್ಲದೆ ಕಂಗೆಟ್ಟಿದ್ದ ಕರಾವಳಿ ಜನತೆಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ವಾರದಿಂದ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ಬೆಳಗ್ಗಿನಿಂದ ಮತ್ತೆ ಮಳೆ ಮುಂದುವರಿದಿದೆ. ಹಾಗಾಗಿ ಈ ಬಾರಿ ಕರಾವಳಿ ಭಾಗದಲ್ಲಿ ಜುಲೈ ತಿಂಗಳ ವಾಡಿಕೆ ಮಳೆಯ ಗುರಿ ಮುಟ್ಟಿದೆ.

Advertisement

ಕರಾವಳಿ ಭಾಗಗಳಲ್ಲಿ ಜುಲೈ ತಿಂಗಳಿನಲ್ಲಿ 881.80 ವಾಡಿಕೆ ಮಳೆಯ ಗುರಿ ತಲುಪಿದೆ. ಕೆಲವು ದಿನಗಳಿಗೆ ಹೋಲಿಸಿದರೆ, ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮಳೆ ಕೊರತೆ ಪ್ರಮಾಣ ಇಳಿಕೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 1,090.2 ವಾಡಿಕೆ ಮಳೆಯಲ್ಲಿ 779.2 ಮಳೆ ಸುರಿದಿದ್ದು, ಬಂಟ್ವಾಳ ತಾಲೂಕಿನಲ್ಲಿ 959.5 ಮಿ.ಮೀ. ವಾಡಿಕೆ ಮಳೆಯಲ್ಲಿ 777.2 ಮಿ.ಮೀ., ಮಂಗಳೂರು ತಾಲೂಕಿನಲ್ಲಿ 876.2 ಮಿ.ಮೀ. ವಾಡಿಕೆ ಮಳೆಯಲ್ಲಿ 728.1 ಮಿ.ಮೀ., ಪುತ್ತೂರು ತಾಲೂಕಿನಲ್ಲಿ 918 ಮಿ.ಮೀ. ವಾಡಿಕೆ ಮಳೆಯಲ್ಲಿ 650.8 ಮಿ.ಮೀ., ಸುಳ್ಯ ತಾಲೂಕಿನಲ್ಲಿ 847.5 ಮಿ.ಮೀ. ವಾಡಿಕೆ ಮಳೆಯಲ್ಲಿ 650.8 ಮಿ.ಮೀ. ಮಳೆ ಸುರಿದಿದೆ.

ಬೆಳಗ್ಗೆಯಿಂದಲೇ ಸುರಿದ ಮಳೆ
ನಗರದಲ್ಲಿ ಮಂಗಳವಾರ ಬೆಳಗ್ಗೆ ಯಿಂದಲೇ ಭಾರೀ ಮಳೆ ಸುರಿದಿದೆ. ಮುನ್ನೆ ಚ್ಚರಿಕಾ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ ಕೆಲಸಕ್ಕೆ ತೆರಳುವ ಮಂದಿ ಮಳೆಗೆ ಪರದಾಡಿದರು.

ಭಾರೀ ಮಳೆಯಿಂದಲಾಗಿ ನಂತೂರು, ಪಿವಿಎಸ್‌ ವೃತ್ತ, ಕಂಕನಾಡಿ, ಜ್ಯೋತಿ ವೃತ್ತ, ಹಂಪನಕಟ್ಟೆ, ಪಂಪ್‌ವೆಲ್‌, ಬಂಟ್ಸ್‌ಹಾಸ್ಟೆಲ್‌, ಬಿಜೈ, ಲಾಲ್‌ಬಾಗ್‌ ಮತ್ತಿತರ ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಗುಡ್ಡ ಕುಸಿತ
ಡೆಂಗ್ಯೂ ಜ್ವರದಿಂದ ರವಿವಾರ ತಡರಾತ್ರಿ ಮೃತಪಟ್ಟ ಖಾಸಗಿ ವಾಹಿನಿ ಕೆಮರಾಮನ್‌ ನಾಗೇಶ್‌ ಪಡು ಅವರ ನೀರುಮಾರ್ಗ ಸಮೀಪದ ಮನೆಯ ಮೇಲೆ ಗುಡ್ಡ ಕುಸಿದ ಘಟನೆ ಮಂಗಳವಾರ ನಡೆದಿದೆ. ಜಪ್ಪಿನಮೊಗರು ಬಳಿ ಮಣ್ಣು ಜರಿದು ಬಿದ್ದು ವಿದ್ಯುತ್‌ ಕಂಬ ಅಪಾಯದ ಸ್ಥಿತಿಯಲ್ಲಿದೆ. ಜ್ಯೋತಿ ವೃತ್ತ ಬಳಿ ಮರವೊಂದು ಬೀಳುವ ಹಂತದಲ್ಲಿದ್ದು, ಕೂಡಲೇ ಮರದ ಕೊಂಬೆ ಕಟಾವು ಮಾಡಬೇಕು ಎಂಬ ದೂರುಗಳು ಮಂಗಳವಾರ ಜಿಲ್ಲಾಡಳಿತ ಕಂಟ್ರೋಲ್‌ ರೂಂಗೆ ಬಂದಿದೆ. ಇನ್ನು, ಅದ್ಯಪಾಡಿ ಚರ್ಚ್‌ ಬಳಿ ಮಣ್ಣು ಕುಸಿತವಾದ ಕಾರಣ, ವಾಹನಗಳಿಗೆ ಬದಲಿ ರಸ್ತೆ ವ್ಯವಸ್ಥೆ ಮಾಡಲಾಯಿತು ಎಂದು ಪೊಲೀಸ್‌ ಕಂಟ್ರೋಲ್‌ ರೂಂನಿಂದ ಮಾಹಿತಿ ದೊರೆತಿದೆ. ನಗರದ ಸಂತ ಅಲೋಶಿಯಸ್‌ ಕಾಲೇಜಿನ ಈಜುಕೊಳದ ಬಳಿ ಗುಡ್ಡ ಕುಸಿದಿದೆ.

Advertisement

ಅಬ್ಬಕ್ಕ ಪಡೆಗೆ ಪೊಲೀಸ್‌ ಆಯುಕ್ತರ ಶ್ಲಾಘನೆ
ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರ ನಡುವೆಯೂ ನಗರ ಪೊಲೀಸ್‌ ಇಲಾಖೆಯ ಅಬ್ಬಕ್ಕ ಪಡೆ ಸಕ್ರಿಯವಾಗಿತ್ತು. ಈ ಬಗ್ಗೆ ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಟ್ವೀಟ್‌ ಮಾಡಿದ್ದು, ಭಾರೀ ಮಳೆಯ ನಡುವೆಯೂ ಮಹಿಳೆಯರ ಸುರಕ್ಷತೆಯ ಅಬ್ಬಕ್ಕ ಪಡೆ ಉತ್ತಮ ಕಾರ್ಯ ಮಾಡಿದೆ ಎಂದು ತಿಳಿಸಿದ್ದಾರೆ.

 ಸಮುದ್ರ ತೀರದಲ್ಲಿ ಮುಂಜಾಗ್ರತೆ
ಸದ್ಯ ಭಾರೀ ಗಾತ್ರದ ಅಲೆಗಳ ಅಬ್ಬರ ಇಲ್ಲ. ಸಮುದ್ರ ತೀರದಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೇವೆ. ಲೈಫ್‌ಗಾರ್ಡ್‌ನವರು ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಪ್ರವಾಸಿಗರು ಕೂಡ ಹೆಚ್ಚಾಗಿ ಬರುತ್ತಿದ್ದು, ಸಮುದ್ರದಲ್ಲಿ ನೀರಾಟವಾಡಲು ಬಿಡುತ್ತಿಲ್ಲ.
 - ಯತೀಶ್‌ ಬೈಕಂಪಾಡಿ, ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next